ಚಂಪಾ: ಮೊನಚು ವ್ಯಂಗ್ಯದ ಚಾಟಿ - Kittur


 ಚಂಪಾ: ಮೊನಚು ವ್ಯಂಗ್ಯದ ಚಾಟಿ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ‘ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡುವುದಿಲ್ಲ.. ದ್ವೇಷವನ್ನೂ ಕೂಡಾ..' ಹೀಗೆಂದು ಸ್ವತಃ ಬರೆದುಕೊಂಡವರು ನಾಡು ಕಂಡ ಧಾರವಾಡದ ಜವಾರಿ ಭಾಷೆಯ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ.

ಅವರ ಬರವಣಿಗೆಯಲ್ಲಿರುವ ಮೊನಚು ಬಹುಶಃ ಬೇರೆಲ್ಲೆಡೆ  ಓದಲು ಸಿಕ್ಕುತ್ತಿರಲಿಲ್ಲ.   ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು, ‘ಒಂದು ಹೊಡೆತ ಎರಡು ತುಂಡು' ಎನ್ನುವಂತೆ ಪ್ರಖರ ಭಾಷೆಯಲ್ಲಿ ಬೆಂಕಿ ಉಂಡೆಯ ಹಾಗೆ ಉಗುಳಿದವರು ಚಂಪಾ. 

ಎಡಪಂಥೀಯ ಪ್ರತಿನಿಧಿಯಾಗಿದ್ದ ಅವರು  ಬಲಪಂಥೀಯ ಕಟು ಟೀಕಾಕಾರರೂ ಆಗಿದ್ದರು. ನಾವೂ ಎಡವೂ ಅಲ್ಲ, ಬಲವೂ ಅಲ್ಲ ಅಂದವರಿಗೆ ‘ನಡುಪಂಥೀಯರು, ಅವಕಾಶವಾದಿಗಳು’ ಎಂದೇ ಮಾತಿನ ಚಾಟಿ ಬೀಸುತ್ತಿದ್ದರು. 

ಅವರ ಟೀಕೆಯ ಮಾತುಗಳಲ್ಲಿ ಖಡ್ಗದ ಮೊನಚು ಇತ್ತು, ‘ಏನ್ ಚಂಪಾ ಇಂವಾ' ಎಂದು ಒಳಗೊಳಗೆ ನಕ್ಕು ಸುಮ್ಮನಾಗುವ ಹಾಸ್ಯ ಬರಹದಲ್ಲಿತ್ತು. ಟೀಕಿಸಿಕೊಂಡವರು   ಓದಿ ಖುಷಿಪಡುತ್ತಿದ್ದ ಹಾಗೆ ಅವರ ಶೈಲಿಯಿತ್ತು. ಟೀಕೆಗಳ ಹಿಂದೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುತ್ತಿತ್ತು. ಎಲ್ಲರ ಜೊತೆಗೂ ಅವರ ಹಾಕ್ಯಾಟ ಇದ್ದೇ ಇರುತ್ತಿತ್ತು: ಬರವಣಿಗೆಯ ಮೊನಚು ವ್ಯಂಗ್ಯದ ಮೂಲಕ.

ಕಾವಿ, ಅವರಲ್ಲಿರುವ ದೋಷ, ಅವರನ್ನು ಓಲೈಸುವವರನ್ನು ಕಂಡರೆ ಚಂಪಾ ಕೋಪಾಗ್ನಿಗೆ ಬಲಿ ಆಗದೆ ಉಳಿದುಕೊಳ್ಳುವುದು ಸಾಧ್ಯವಿಲ್ಲದ ಮಾತಾಗಿತ್ತು. ಕನ್ನಡದ ಸಾಹಿತಿಗಳು ಮತ್ತು ಪತ್ರಕರ್ತರು ಅವರ ಮೊನಚಿನ ಮಾತುಗಳಿಂದ ಇರಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ.  

ಪ್ರತಿಭಟನೆ ವಿಭಿನ್ನ

ಕರ್ನಾಟಕ  ವಿಶ್ವವಿದ್ಯಾಲಯವು ಹುಬ್ಬಳ್ಳಿಯ ಮೂಜಗಂ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟಾಗ ಅಕ್ಷರಶಃ ಬೀದಿಗೆ ಬಂದರು. ಧಾರವಾಡದ ರಸ್ತೆಗಳ ಉದ್ದಕ್ಕೂ ಕೂಗಿ, ‘ತಗೊಳ್ರಿ ರೂಪಾಯಿಗೆ ಗೌರವ ಡಾಕ್ಟರೇಟ್' ಎಂದು ಕಟುವಾಗಿ ಶಬ್ದಗಳಲ್ಲಿ ಪ್ರತಿಭಟಿಸಿದ್ದರು.

ಡಾ. ಪಾಟೀಲ ಪುಟ್ಟಪ್ಪ ಅವರನ್ನೂ ಬಿಟ್ಟಿರಲಿಲ್ಲ. ತಮ್ಮ ಬರಹ, ವರದಿಗಳ ಮೂಲಕ ಕರ್ನಾಟಕದ ಎಲ್ಲರನ್ನು ಎದುರು ಹಾಕಿಕೊಂಡಿದ್ದ ಲಂಕೇಶ್, ರವಿ ಬೆಳೆಗೆರೆ ಅಂಥವರೇ ‘ಎಲ್ಲಿ ಬಿಡ್ರೋ ಅವನ ಉಸಾಬರಿ' ಎಂದು ಕೆಲ ಸಂದರ್ಭಗಳಲ್ಲಿ ತೆಪ್ಪಗಿದ್ದದ್ದೂ ಉಂಟು.

ಪತ್ರಿಕೆ ಆರಂಭದಲ್ಲಿ ಲಂಕೇಶ್, ಚಂಪಾ ಬರಹ ಬಳಸಿಕೊಂಡರು. ‘ನೋಟ' ಎಂಬ ಹೆಸರಿನ ಅಂಕಣವನ್ನೂ ಚಂಪಾ ಬರೆಯುತ್ತಿದ್ದರು. ರಾಮಕೃಷ್ಣ ಹೆಗಡೆ ಮೇಲಿನ ಲಂಕೇಶ್ ವ್ಯಾಮೋಹ ಇದಕ್ಕೆ ಕುತ್ತು ತಂದಿತ್ತು. 

ಮೊದಲೆಲ್ಲ ಇದೇ ಚಂಪಾರನ್ನು ಅಪ್ಪಿಕೊಳ್ಳುತ್ತಿದ್ದ ಲಂಕೇಶ್, ಮುಂದೆ ಕಟುವಾಗಿ ಟೀಕಿಸಲು ಆರಂಭಿಸಿದ್ದರು. ‘ನೀಚ, ಕೃತಘ್ನ..' ಎಂದೆಲ್ಲ ಜರಿದರು. ವಾರಪತ್ರಿಕೆಯಲ್ಲಿ  ಟೀಕಿಸುತ್ತಿದ್ದ ಲಂಕೇಶ್ ಅವರನ್ನು, ಎರಡೂ ತಿಂಗಳಿಗೊಮ್ಮೆ ಹೊರಡಿಸುತ್ತಿದ್ದ ಚಂಪಾ ಸಂಪಾದಕತ್ವದ ಪತ್ರಿಕೆ ‘ಸಂಕ್ರಮಣ'ದಲ್ಲಿ ಕಾಲು ಕೆದರುತ್ತಿದ್ದರು. ಅವರು ನೀಚ, ಕೃತಘ್ನ ಎಂದರೆ, ‘ಅಂವಾ ನಮ್ಮಣ್ಣ' ಎಂಬ ಇರಿತ ಅವರ ಬರಹದಲ್ಲಿತ್ತು. 

ಲಂಕೇಶ್ ನಿಧನಾನಂತರ ರವಿ ಬೆಳಗೆರೆÉ ಒಮ್ಮೆ ಅವರ ವಾರಸುದಾರನಂತೆ ಬರೆದುಕೊಂಡಿದ್ದರು. ಅದಕ್ಕೂ ಇವರ ಟೀಕೆ ಹೀಗಿತ್ತು: ಅಂವ ಲಂಕೇಶ್, ಇಂವ ಅಂವನ ಕೇಶ!

ಇಂದಿರಾ ಗಾಂಧಿ ಘೋಷಿಸಿದ್ದ ತುರ್ತು ಪರಿಸ್ಥಿತಿ ಕಟುವಾಗಿ ವಿರೋಧಿಸಿ ಜೈಲು ಸೇರಿದ್ದ ಚಂಪಾ ‘ರಸ್ತೆ ದಾಟಿ ಆ ಕಡೆಗಿದ್ದೇನಷ್ಟೇ'   ಎಂದು ಅರ್ಥಗರ್ಭಿತವಾಗಿ  ತಮಾಷೆ ಮಾಡಿದ್ದರು. ರಸ್ತೆ ಈ ಕಡೆಗೆ ಇವರ ಮನೆ ಇದ್ದರೆ. ಆ ಕಡೆ ಧಾರವಾಡ ಸಬ್ ಜೈಲಿರುವುದು ಇದಕ್ಕೆ ಕಾರಣವಾಗಿತ್ತು. 

ಚಂಪಾ ಅವರ ಧಾರವಾಡ ಮನೆ ಎದುರು ಹುಚ್ಚಾಸ್ಪತ್ರೆ ಇತ್ತು, ಈಗಲೂ ಇದೆ. ಆಕಡೆಗೆ ಜೈಲು. ಬಲಗಡೆಗೆ ಪೊಲೀಸ್ ಠಾಣೆ. ಇದರ ಮೇಲೊಂದು ಕವಿತೆ ಕೂಡಾ ಬರೆದಿದ್ದರು. ಕೊನೆಯ ಸಾಲುಗಳು ಹೀಗಿದ್ದವು: ಮನೆ ಪಕ್ಕಕ್ಕೆ ಪೊಲೀಸ್ ಠಾಣೆ, ಹೀಗಾಗಿ ಕಳ್ಳರ ಭಯವಿಲ್ಲ. ಪೊಲೀಸರದೇ ಭಯ..!

70 ರಿಂದ 90 ರವರೆಗೆ ಧಾರವಾಡ ಯುವ  ಜನರ, ಬಂಡಾಯ ಮನೋಭಾವದ ವ್ಯಕ್ತಿಗಳ ಪಾಲಿನ ಪೀತಿಯ ಚಂಪಾ ನೆನಪು ಮತ್ತೆ, ಮತ್ತೆ ಕಾಡುತ್ತಿರುತ್ತದೆ! ವ್ಯಂಗ್ಯವನ್ನೂ ಸಹಿಸದ ಮನಸುಗಳು ಇಂದು ಜನ್ಮ ತಾಳಿವೆ. ಇವರ ಮಧ್ಯದಿಂದ ಎದ್ದು ಹೋಗಿ  ನೀರವ ಭಾವ ಸೃಷ್ಟಿಸಿದ್ದಾರೆ.