‘ಕಳಪೆ ಕಾಮಗಾರಿ ಗುತ್ತಿಗೆದಾರರನ್ನು ಕಪ್ಪ ಪಟ್ಟಿಗೆ ಸೇರಿಸಿ'
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ರಸ್ತೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಅಂಥವರ ಹೆಸರುಗಳನ್ನು ಯಾವುದೇ ಆತಂಕವಿಲ್ಲದೆ ಕಪ್ಪುಪಟ್ಟಿಗೆ ಶಿಫಾರಸು ಮಾಡಿ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ಥಳೀಯ ತಾಲೂಕು ಪಂಚಾಯ್ತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುವವರನ್ನು ಅಭಿನಂದಿಸಿ ಎಂದೂ ಹೇಳಿದರು.
ಸಾಮಾಜಿಕ ಭದ್ರತೆ ಯೋಜನೆಯಡಿ ಸಲ್ಲಿಸಲಾಗುವ ಸಂಧ್ಯಾಸುರಕ್ಷಾ, ಅಂಗವಿಕಲ, ವಿಧವಾ ಸೇರಿ ವಿವಿಧ ಮಾಸಾಶನಕ್ಕಾಗಿ ಫಲಾನುಭವಿಗಳು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬ ದೂರಿದೆ. ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಸಕ್ಷಮ ಪ್ರಾಧಿಕಾರದ ಅಧಿಕಾರಿ ಬರೆಯಬೇಕು ಎಂದು ಅವರು ತಾಕೀತು ಮಾಡಿದರು.
ಅಗತ್ಯ ಕೆಲಸಗಳಿಗಾಗಿ ಕಚೇರಿಗೆ ಆಗಮಿಸುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ತಾಳ್ಮೆಯಿಂದ ಸಮಸ್ಯೆ ಆಲಿಸಿ ಪರಿಹರಿಸಲು ಪ್ರಯತ್ನಿಸಬೇಕು. ಒಳ್ಳೆಯದು ಮಾಡಿದರೆ ಯಾಕೆ ಮಾಡಿದಿರೆಂದು ಯಾರೂ ಪ್ರಶ್ನಿಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ತಹಶೀಲ್ದಾರ್ ಕಚೇರಿಗೆ ಜನರು ಹೆಚ್ಚು ಅಲೆದಾಡಬಾರದು ಎಂದು ಸರ್ಕಾರ ಆಯಾ ಗ್ರಾಮ ಪಂಚಾಯ್ತಿಯಲ್ಲಿ ಇಫೈಲಿಂಗ್ ವ್ಯವಸ್ಥೆ ಮಾಡಿದೆ. ಕಚೇರಿಗೆ ಅಲೆದಾಡಿಸುವ ಕ್ರಮವನ್ನು ಅಧಿಕಾರಿಗಳು ಬಿಡಬೇಕು ಎಂದು ಸೂಚಿಸಿದರು.
ಕಿತ್ತೂರು ತಾಲ್ಲೂಕಿನ 44ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ 29 ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ 15 ಪ್ರಗತಿಯಲ್ಲಿವೆ. 4 ಕಾಮಗಾರಿಗಳು ಪೂರ್ತಿಯಾಗಿವೆ. ಅವುಗಳನ್ನು ಆಯಾ ಗ್ರಾಮ ಪಂಚಾಯ್ತಿಯವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಧಿಕಾರಿ ಮಾಹಿತಿ ನೀಡಿದರು.
ಮಂಜೂರಾದ ಎಲ್ಲ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಬೇಕು. ನನ್ನ ವೇಗಕ್ಕೆ ತಕ್ಕಂತೆ ನೀವೂ ಕೆಲಸ ಮಾಡಬೇಕು. ಸಕಾರಣವಿಲ್ಲದೆ ಪರಿಶೀಲನಾ ಸಭೆಗೆ ಗೈರಾಗುಳಿಯುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸು ಜಾರಿ ಮಾಡಬೇಕು ಎಂದು ವೇದಿಕೆಯಲ್ಲಿದ್ದ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರಿಗೆ ಸೂಚನೆ ನೀಡಿದರು.
ಜೋತು ಬಿದ್ದ ವಿದ್ಯುತ್ ತಂತಿಯಿಂದಾಗಿ ಅಲ್ಲಲ್ಲಿ ಕಬ್ಬು ಸುಟ್ಟು ರೈತರಿಗೆ ಹಾನಿಯಾದ ಪ್ರಕರಣಗಳು ವರದಿಯಾಗಿವೆ. ಜೋತು ಬಿದ್ದಿರುವ ತಂತಿಗಳನ್ನು ಮೇಲಕ್ಕೆತ್ತರಿಸಬೇಕು. ಬೇಕಿದ್ದರೆ ಕಂಬಗಳ ಎತ್ತರವನ್ನು ಹೆಚ್ಚಿಸಲು ಹೆಸ್ಕಾಂ ಯೋಜನೆ ರೂಪಿಸಬೇಕು. ವರ್ಷವಿಡಿ ದುಡಿದ ರೈತರ ಬೆಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಸುಭಾಸ ಸಂಪಗಾಂವ, ಶಿಕ್ಷಣ, ಆರೋಗ್ಯ, ವಿದ್ಯುತ್, ಎಪಿಎಂಸಿ, ಕೃಷಿ, ತೋಟಗಾರಿಕೆ, ಉಪನೋಂದಣಿ, ಅರಣ್ಯ, ಪೊಲೀಸ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಸೇರಿ ವಿವಿಧ ಇಲಾಖೆಗಳು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ನೀವು ಬಂದಿರಿ; ‘ಬೆಳಕು' ಎಲ್ಲಿಗೆ ಬಂತು?
ಚನ್ನಮ್ಮನ ಕಿತ್ತೂರು: ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಪ್ರಾರಂಭವಾಗಿತ್ತು. ಆದರೆ ಸ್ಪಲ್ಪ ವಿಳಂಬವಾಗಿ ಸಭೆಗೆ ಬಂದವರು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಎಂ. ಕೆ. ಹಿರೇಮಠ ಅವರು.
ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಬಂದ ಕೂಡಲೇ ಅವರನ್ನೇ ಲಘು ಹಾಸ್ಯದೊಂದಿಗೆÀ ಪ್ರಶ್ನಿಸಿದರು: ‘ನೀವು ಬಂದಿರಿ. ಆದರೆ ‘ಬೆಳಕು’ (ಯೋಜನೆ) ಎಲ್ಲಿಗೆ ಬಂದಿದೆ’ ಎಂದು. ಇಲಾಖೆ ವೇಗವಾಗಿ ಕೆಲಸ ಮಾಡುವುದಿಲ್ಲ ಎಂದು ಜನರ ಆರೋಪವಿದೆ. ಜನರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕು ಎಂದೂ ಅವರು ಕಿವಿಮಾತು ಹೇಳಿದರು.