ಪತ್ನಿಯೇ ಮಾಡಿಸಿದಳು ಪತಿಯ ಹತ್ಯೆ! - Kittur
‘ಪತ್ನಿ ಈಕೆಯ ಪ್ರಿಯಕರನ ಬಂಧನ'
ಪತ್ನಿಯೇ ಮಾಡಿಸಿದಳು ಪತಿಯ ಹತ್ಯೆ! 
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಮೇಲಿರುವ ತಿಮ್ಮಾಪುರ ಬಳಿ ಸರ್ವಿಸ್ ರಸ್ತೆಯ ಪಕ್ಕದಲ್ಲಿ ನಡೆದಿದ್ದ ರಮೇಶ ಮಾದಿಗರ (36) ಕೊಲೆಯ ರಹಸ್ಯವನ್ನು ಭೇದಿಸಿರುವ ಕಿತ್ತೂರು  ಪೊಲೀಸರು ಇಬ್ಬರು ಆರೋಪಿಗಳನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಧಾರವಾಡ ತಾಲ್ಲೂಕಿನ ಬೋಗೂರು ಗ್ರಾಮದ ಬಸವರಾಜ ಹರಿಜನ (20) ಹಾಗೂ ಕೊಲೆಯಾಗಿದ್ದವನ ಪತ್ನಿ ಶ್ರೀದೇವಿ ಮಾದಿಗರ (30)  ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರ ನಡುವಿನ ಅನೈತಿಕ ಸಂಬಂಧವೇ ಗಂಡನ ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಪೊಲೀಸ್ ಮೂಲ ತಿಳಿಸಿದೆ.
ಕೊಲೆ ಮಾಡಲಾದ ಬಸವರಾಜನ ಸಹೋದರಿಯನ್ನು ಹಿರೇಬಾಗೇವಾಡಿ ಸಮೀಪದ ಬಡಸ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಮರಿಕಟ್ಟಿಗೆ ಮದುವೆ ಮಾಡಿಕೊಡಲಾಗಿದ್ದ ಶ್ರೀದೇವಿ ತವರು ಮನೆ ಕೂಡಾ ಬಡಸ ಗ್ರಾಮವಾಗಿದೆ. ಬಸವರಾಜನು ಸಹೋದರಿ ಮನೆಗೆ ಹೋದಾಗ ಶ್ರೀದೇವಿಯ ಪರಿಚಯವಾಗಿದೆ. ಇಬ್ಬರಲ್ಲೂ ಸಂಬಂಧ ಬೆಳೆದಿದೆ. ಅಕ್ರಮ ಈ ಸಂಬಂಧವೇ ಪತಿಯನ್ನು ಹತ್ಯೆ ಮಾಡಿಸುವ ಮಟ್ಟಕ್ಕೆ  ಹೋಯಿತು ಎಂದು ತಿಳಿದುಬಂದಿದೆ.
ತನಿಖೆ ದಾರಿ ತಪ್ಪಿಸಲು ಯತ್ನ
ಕೊಲೆಯಾದ ಗಂಡನ ಗುರುತು ಹಿಡಿಯಲು ಜಿಲ್ಲಾ ಆಸ್ಪತ್ರೆಗೆ ಪೊಲೀಸರು ಪತ್ನಿ ಶ್ರೀದೇವಿಯನ್ನು  ಕರೆದೊಯ್ದಾಗ ಸ್ಥಳದಲ್ಲಿಯೇ ಪ್ರಾಥಮಿಕ ವಿಚಾರಣೆ ಆರಂಭಿಸುತ್ತಾರೆ. ಆಕೆಯ ಮಾತುಗಳು ಪೊಲೀಸರಲ್ಲಿ ಅನುಮಾನ ಹುಟ್ಟಿಸುತ್ತವೆ.
ಮತ್ತೆ ವಿಚಾರಿಸಿದಾಗ ಶ್ರೀದೇವಿ ತನ್ನ  ಮಾಜಿ ಪ್ರಿಯಕರನ ಹೆಸರನ್ನು ಬಾಯಿ ಬಿಡುತ್ತಾಳೆ. ಆತನನ್ನು ಕರೆತಂದು ವಿಚಾರಣೆ ಆರಂಭಿಸುತ್ತಾರೆ. ಕಳೆದೊಂದು ವರ್ಷದ ಹಿಂದೆ  ನನ್ನ ಮತ್ತು ಆಕೆಯ  ಸಂಬಂಧವಿತ್ತು. ಈಗ ಆಕೆಯ ಉಸಾಬರಿ ಬಿಟ್ಟಿದ್ದೇನೆ ಎಂದು ಆತ ಪರಿ, ಪರಿಯಾಗಿ ಹೇಳಿಕೊಂಡಿದ್ದಾನೆ. ಆಕೆಯ ಸ್ನೇಹ ಬಿಡುವಾಗ ಜಗಳ ಮಾಡಿಕೊಂಡು ಬಿಟ್ಟಿರುವುದಾಗಿಯೂ ಒಪ್ಪಿಕೊಂಡಿದ್ದಾನೆ.
ಕೊನೆಗೆ  ಪೊಲೀಸರ  ತೀವ್ರ ವಿಚಾರಣೆಯಿಂದಾಗಿ ಹೊಸ ಪ್ರಿಯಕರನ ಹೆಸರು   ಶ್ರೀದೇವಿಯಿಂದ  ಬಹಿರಂಗಗೊಂಡಿತು ಎಂದು ಗೊತ್ತಾಗಿದೆ.
 

0/Post a Comment/Comments