ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪುನುಗು ಬೆಕ್ಕು ಬೇಟೆ ಆಡಿ ಬೈಕ್ ಮೇಲೆ ತಾಲೂಕಿನ ದೇಗಾಂವ ಗ್ರಾಮದ ಬಳಿ ಕೊಂಡೊಯ್ಯುತ್ತಿದ್ದ ನಾಲ್ಕು ಆರೋಪಿಗಳನ್ನು ಕಿತ್ತೂರು ಉಪವಲಯ ಅರಣ್ಯ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ. ಇನ್ನೂ ಒಬ್ಬ ಆರೋಪಿ ಪರಾರಿಯಾಗಿದ್ದಾನೆ.
ಕಿತ್ತೂರು ಕೊಂಡವಾಡ ಚೌಕ್ದಲ್ಲಿರುವ ಬಸವರಾಜ ಮಲ್ಲೇಶ ಭಜಂತ್ರಿ (48), ಹಣಮಂತ ಮರೆಪ್ಪ ಭಜಂತ್ರಿ (31), ಅರುಣ ಚನಬಸಪ್ಪ ಭಜಂತ್ರಿ (36) ಹಾಗೂ ಬೈಲಹೊಂಗಲ ತಾಲ್ಲೂಕಿನ ಹೊಳಿಹೊಸೂರು ಗ್ರಾಮದ ಮಂಜುನಾಥ ರುದ್ರಪ್ಪ ಭಜಂತ್ರಿ (32) ಬಂಧಿತ ಆರೋಪಿಗಳಾಗಿದ್ದಾರೆ. ಕಿತ್ತೂರು ಇದೇ ವೃತ್ತದ ಭರಮೇಶ ರುದ್ರಪ್ಪ ಭಜಂತ್ರಿ (30) ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ 2 ಬೈಕು, 10 ತಂತಿಯ, 3 ವಾಯರ್ ಬಲೆಗಳು, 4 ಮೊಬೈಲ್ ಪೋನ್ಗಳು, ಬೇಟೆಯಾಡಿದ ಬೆಕ್ಕು ಹಾಗೂ ಬೇಟೆಗೆ ಬಳಸಲಾಗಿದ್ದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
ಡಿಸಿಎಫ್ ಹರ್ಷಬಾನು ಮಾರ್ಗದರ್ಶನದಲ್ಲಿ ಎಸಿಎಫ್ ಶಿವರುದ್ರಪ್ಪ ಕಬಾಡಗಿ, ಅರಣ್ಯ ಅಧಿಕಾರಿಗಳಾದ ಶ್ರೀನಾಥ ಕಡೋಲ್ಕರ್, ವಾಣಿಶ್ರೀ ಹೆಗಡೆ, ಸಂಜಯ ಮಗದುಮ್, ಅರಣ್ಯ ರಕ್ಷಕರಾದ ಅಜೀಜ ಮುಲ್ಲಾ, ಪ್ರವೀಣ ದೂಳಪ್ಪಗೋಳ, ಗಿರೀಶ ಮೆಕ್ಕೇದ, ಮಹಮ್ಮದರಫಿ ತಹಶೀಲ್ದಾರ್ ಕಾರ್ಯಾಚರಣೆ ತಂಡದಲ್ಲಿದ್ದರು.