ಮನೆಯಲ್ಲಿರಿ : ಬಂದಿದೆ ವಾರಾಂತ್ಯ ಕರ್ಫ್ಯೂ


 ಮತ್ತೆ ಬಂತು ವಾರಾಂತ್ಯ ಕರ್ಫ್ಯೂ: ಇಂದು ರಾತ್ರಿ 8 ರಿಂದ ಪ್ರಾರಂಭ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಜ. 7ರ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗುವ ಶನಿವಾರ ಮತ್ತು ಭಾನುವಾರದ ವಾರಾಂತ್ಯ ಕಫ್ರ್ಯೂ ಜ. 10 (ಸೋಮವಾರ) ಬೆಳಗಿನ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ತಿಳಿಸಿದ್ದಾರೆ. 

ಇಲ್ಲಿಯ  ಪಟ್ಟಣ  ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ಸಂಜೆ ನಡೆದ ಪೊಲೀಸ್ ಅಧಿಕಾರಿಗಳು, ಮುಖ್ಯಾಧಿಕಾರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ವರ್ತಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಈ ತೀರ್ಮಾನ ಪ್ರಕಟಿಸಿದರು.

ವಾರಾಂತ್ಯ ಕಫ್ರ್ಯೂ ಇರುವ ಹಿನ್ನೆಲೆಯಲ್ಲಿ ಎರಡೂ ದಿನ ಮುಂಜಾನೆ 6 ಮಧ್ಯಾಹ್ನ 12 ಗಂಟೆ ವರೆಗೆ ವ್ಯಾಪಾರ, ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲಾಗಿದೆ. ಹೋಟೆಲ್, ದಾಬಾದವರು ಪಾರ್ಸಲ್ ಮಾತ್ರ ಕೊಡಬಹುದು. ಔಷಧ, ಹಾಲು, ಹಣ್ಣು ಸೇರಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ. ಇವುಗಳಿಗೆ ವಾರಾಂತ್ಯ ಕಫ್ರ್ಯೂ ನಿಯಮಗಳು ಅಡ್ಡಿ ಬರುವುದಿಲ್ಲ ಎಂದರು.

ಜ. 8 ರಿಂದ 19 ರವರೆಗೆ ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿರುತ್ತದೆ.  ಈ ಅವಧಿಯಲ್ಲಿ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮ ಗಳನ್ನು ರದ್ದು ಪಡಿಸಲಾಗಿದೆ. ನಿಗದಿ ಪಡಿಸಲಾದ ವಿವಾಹ ಕಾರ್ಯಕ್ರಮವನ್ನು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ನಡೆಸಲು ಕಟ್ಟೆಚ್ಚರ ನೀಡಲಾಗಿದೆ. ಒಳಾಂಗಣದಲ್ಲಿದ್ದರೆ 100 ಮತ್ತು ಹೊರಾಂಗಣದಲ್ಲಿ 200 ಜನರು ಮಾತ್ರ ಸೇರಬೇಕು. ಸರ್ಕಾರದ ಕೋವಿಡ್ ಮಾರ್ಗಸೂಚಿಗಳಾದ  ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ   ತಿಳಿವಳಿಕೆ ನೀಡಲಾಗುವುದು. ಧ್ವನಿವರ್ಧಕ ಅಥವಾ ಡಂಗೂರ  ಮೂಲಕ ಅರಿವು ಮೂಡಿಸಲಾಗುವುದು. ಈಗಾಗಲೇ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.

ಬಸ್ ಸಂಚಾರ ಇರುತ್ತದೆ. ಕೈಗಾರಿಕೆ ಪ್ರದೇಶಗಳಿಗೆ ಕೆಲಸಕ್ಕೆ ತೆರಳುವವರು ಗುರುತಿನ ಚೀಟಿ ತೋರಿಸಿ ಹೋಗಬಹುದು ಎಚಿದರು.

ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‍ಐಗಳಾದ ದೇವರಾಜ ಉಳ್ಳಾಗಡ್ಡಿ, ಎಸ್. ಬಿ. ಮಾವಿನಕಟ್ಟಿ ಇದ್ದರು.

ಸಂಕ್ರಮಣ ಸ್ನಾನ ನಿಷೇಧ

ಮಕರ ಸಂಕ್ರಮಣ ನಿಮಿತ್ತ ಜ. 14 ಮತ್ತು 15 ರಂದು ತಾಲ್ಲೂಕಿನ ಎಂ. ಕೆ. ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿಯಲ್ಲಿಯ  ಭಕ್ತರ ಸಾಮೂಹಿಕ ಪುಣ್ಯ ಸ್ನಾನ ನಿಷೇಧಿಸಲಾಗಿದೆ. ಎಲ್ಲರೂ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಶೀಲ್ದಾರ್ ಅವರು ತಾಕೀತು ಮಾಡಿದರು.

0/Post a Comment/Comments