‘ಮುಖ ಉಳಿಸಿದವರಿಗೆ' ಶಾಸಕರು ನೀಡಿದರು ಉಡುಗೊರೆ! : ಕಿರಣ ವಾಳದ ವ್ಯಂಗ್ಯ - Kittur‘ಮುಖ ಉಳಿಸಿದವರಿಗೆ' ಶಾಸಕರು ನೀಡಿದರು ಉಡುಗೊರೆ! 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ‘ನಾನು ಮೋಸ ಹೋದೆನೊ, ಅವರು ಮೋಸ ಮಾಡಿದರೊ ತಿಳಿಯುತ್ತಿಲ್ಲ. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ‘ಮುಖ' ಉಳಿಸಿದ್ದಕ್ಕೆ ಈಗ ಅವರು ಉಡುಗೊರೆ ನೀಡಿದ್ದಾರೆ..'

ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಹಾಗೂ 7 ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಿರಣ ವಾಳದ ಅವರು ಶಾಸಕ ಮಹಾಂತೇಶ ದೊಡ್ಡಗೌಡರ ಬಗ್ಗೆ ಪರೋಕ್ಷವಾಗಿ ಆಡಿದ ವ್ಯಂಗ್ಯ ಮತ್ತು ವಿಷಾದ ಮಿಶ್ರಿತ ನುಡಿಗಳಿವು. 

ಡಿ. 20 ರಂದು ‘ಪ್ರೆಸ್‍ಕ್ಲಬ್ ವಾರ್ತೆ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಜನರು ನನ್ನ ಪರವಾಗಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಅವರ ಜೊತೆಗಿನ ಸಂದರ್ಶನದ  ಆಯ್ದ ಭಾಗವನ್ನಿಲ್ಲಿ   ಓದುಗರಿಗಾಗಿ ನೀಡಲಾಗಿದೆ.

‘ಕೊಟ್ಟ ಮಾತಿನಂತೆ ಶಾಸಕ ಮಹಾಂತೇಶ ದೊಡ್ಡಗೌಡರ ನಡೆದುಕೊಳ್ಳಲಿಲ್ಲ. ವಾರ್ಡಿನಲ್ಲಿ ಸಮೀಕ್ಷೆ ಮಾಡಿಸಿ ಜನರು   ಅನುಮೋದನೆ ನೀಡಿದವರಿಗೆ ಬಿಜೆಪಿ ಟಿಕೆಟ್ ಕೊಡಲಾಗುವುದು ಎಂದು ಹೇಳಿದ್ದರು. ಸಮೀಕ್ಷೆಯಲ್ಲೂ ನಾನು ಮುಂದಿದ್ದೆ. ಆದರೂ ನನಗೆ ಮೋಸವಾಗಿದೆ. ಶಾಸಕರಿಂದ ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ' ಎಂದು ನುಡಿದರು.

‘ಪಟ್ಟಣ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ  ಕಾಂಗ್ರೆಸ್ ತೆಗೆದುಕೊಂಡ ನಿಲುವಿಗೆ ಬೇಸತ್ತಿದ್ದೆ. ಅದೇ ಸಂದರ್ಭದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ನಮ್ಮ ಕುಟುಂಬದವರ ಮೂಲಕ ನನ್ನನ್ನು ಸಂಪರ್ಕಿಸಿದರು.    ‘ನಾನು ಶಾಸಕನಾಗಿದ್ದೇನೆ,  ನನ್ನ ಮುಖ ಉಳಿಸು' ಎಂದು ಕೇಳಿದರು. ‘ನಿನ್ನನ್ನು ಕೈ ಬಿಡುವುದಿಲ್ಲ’ ಎಂದು ವಿನಮ್ರವಾಗಿ ಕೇಳಿಕೊಂಡರು. ಆದರೆ ಈಗ ಬಂದಿರುವ ಪಟ್ಟಣ ಪಂಚಾಯ್ತಿಯಲ್ಲಿ ಏನು ಮಾಡಿದ್ದಾರೆ ಎಂಬುದು ಜನರಿಗೆ ಮತ್ತು ಮತದಾರರಿಗೆ ಗೊತ್ತಿದೆ. ಕೋರ್ ಕಮೀಟಿಯ ವಿಷಯ ಹೇಳಿಕೊಂಡು ನನಗೆ ಶಾಸಕರು ಮೋಸ ಮಾಡಿದರು. ಟಿಕೆಟ್ ತಪ್ಪಿಸಿದ್ದಕ್ಕೆ ಸೌಜನ್ಯಕ್ಕಾದರೂ ನನ್ನ ಜೊತೆ ಮಾತನಾಡಲಿಲ್ಲ' ಎಂದು ಹಿಂದಿನ ಘಟನೆಗಳ ಮೆಲುಕು ಹಾಕಿದರು.

‘ಮೂಲತಃ ವಿಶ್ಲೇಷಣೆ ಮತ್ತು ಪ್ರಶ್ನೆ ಮಾಡುವ ಸ್ವಭಾವ ನನ್ನದು. ಕಿತ್ತೂರು ಪಟ್ಟಣ ಪಂಚಾಯ್ತಿಗೆ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೋಟ್ಯಾಂತರ ದುಡ್ಡು ಹರಿದು ಬರುತ್ತಿದೆ. ಈ ದುಡ್ಡಿನಲ್ಲಿ ಕೈಗೊಳ್ಳುವ ಕಾಮಗಾರಿ ಬಗ್ಗೆ ಪ್ರಶ್ನಿಸಬಹುದು ಎಂಬ ಅನುಮಾನವೂ ಅವರಲ್ಲಿದ್ದಂತೆ ನನಗೆ ಕಾಣುತ್ತಿದೆ. ಇದೂ ಕೂಡಾ ಟಿಕೆಟ್ ನಿರಾಕರಣೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರಬಹುದು' ಎಂದು ಹೇಳಿದರು.

ಕೈ ಬಿಡುವುದಿಲ್ಲ ಮತದಾರ

‘ಅಧಿಕಾರ ನನಗೆ ಇರಲಿ ಅಥವಾ ಇಲ್ಲದಿರಲಿ ಸೇವಾ ಕಾರ್ಯ ಮಾಡುವ ಮನೋಭಾವ ನನ್ನದು. ಕಾಂಗ್ರೆಸ್ ಮತ್ತು ಬಿಜೆಪಿ  ನನಗೆ ಮಾಡಿರುವ ಅನ್ಯಾಯವನ್ನು  ಸಾರ್ವಜನಿಕರು ಸನಿಹದಿಂದ ನಿಂತು ನೋಡಿದ್ದಾರೆ. ಇಲ್ಲಿಯವರೆಗೆ ನನ್ನ ಕೆಲಸಗಳನ್ನೂ ಜನರು ನೋಡಿದ್ದಾರೆ. ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ನಾನು ಸೇವೆ ಮಾಡಿರುವುದನ್ನು ಕಂಡಿದ್ದಾರೆ. ಜನರಿಗೆ ತೊಂದರೆ ಬಂದಾಗ ಸ್ಪಂದನೆ ಮಾಡುತ್ತ ಬಂದಿರುವೆ. ನನ್ನ ಕೆಲಸಗಳು ನನಗೆ ಶ್ರೀರಕ್ಷೆಯಾಗಿವೆ. ಮತದಾರ ನನ್ನ ಕೈ ಬಿಡುವುದಿಲ್ಲ' ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಭರವಸೆ

‘ಮಳೆಗಾಲದಲ್ಲಿ ಚರಂಡಿ ನೀರು ಮೇಲಿನಿಂದ ಹರಿದು ಬಂದು ಇಲ್ಲಿ ರಸ್ತೆ ಮೇಲೆ ಸಂಗ್ರಹವಾಗುತ್ತದೆ. ಇದರಿಂದ ನಿಚ್ಚಣಕಿ ಮಾರ್ಗದ ಹಾಗೂ ಬಸವೇಶ್ವರ ಬಡಾವಣೆ ಜನರು ಪಡುವ ತೊಂದರೆ ವಿವರಿಸಲು ಸಾಧ್ಯವಿಲ್ಲ. ಕಳೆದ ಅವಧಿಯಲ್ಲಿ 8ನೇ ವಾರ್ಡಿನಿಂದ ಆಯ್ಕೆಯಾಗಿ ಬಂದಾಗ ಅದರ ಅರ್ಧ ಕೆಲಸ ಮಾಡಿರುವೆ. ಇನ್ನರ್ಧ ಉಳಿದಿದೆ. ಗೆದ್ದರೆ ಅದನ್ನೂ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು' ಎಂದರು.

‘7 ನೇ ವಾರ್ಡು ತನ್ನ ತವರು ವಾರ್ಡು. ನನ್ನ ಅಭಿವೃದ್ಧಿ ಪರ ಕೆಲಸಗಳನ್ನು ಈಗಾಗಲೇ ನೋಡಿದ್ದಾರೆ. ಅವರು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ' ಎಂದರು.

0/Post a Comment/Comments