ತೀವ್ರ ಹಣಾಹಣಿಯಲ್ಲಿ ಕೊನೆಗೂ ಗೆದ್ದ ಬಿಜೆಪಿ - Kittur

ತೀವ್ರ ಹಣಾಹಣಿಯಲ್ಲಿ ಕೊನೆಗೂ ಗೆದ್ದ ಬಿಜೆಪಿ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸ್ಥಳೀಯ ಪಟ್ಟಣ ಪಂಚಾಯ್ತಿಯ 18 ವಾರ್ಡುಗಳಿಗೆ ಡಿ. 27 ರಂದು ನಡೆದ ಚುನಾವಣೆ ಫಲಿತಾಂಶ ಗುರುವಾರ ಘೋಷಿಸಲಾಗಿದ್ದು,  ಬಿಜೆಪಿ ಮೇಲುಗೈ ಸಾಧಿಸಿದೆ. ಒಗ್ಗಟ್ಟು ಪ್ರದರ್ಶಿಸದ ಕಾಂಗ್ರೆಸ್É 5 ಸ್ಥಾನಗಳಲ್ಲಿ ಗೆದ್ದಿದೆ. ನಿರೀಕ್ಷೆಯಂತೆ ಪಕ್ಷೇತರರು 4 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. 

ನಿಚ್ಚಳ ಬಹುಮತ ನಿರೀಕ್ಷೆಯಲ್ಲಿದ್ದ ಬಿಜೆಪಿ ಕೆಲವರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಎಡವಿತು. ಅದರ ಪರಿಣಾಮ ಈ ಚುನಾವಣೆಯಲ್ಲಿ ಎದ್ದು ಕಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

3 ಮತ್ತು 10 ನೇ ವಾರ್ಡುಗಳಿಗೆ ಕಾಂಗ್ರೆಸ್ ಮುಖಂಡ ಹನೀಫ್ ಸುತಗಟ್ಟಿ ಅವರ ಬೆಂಬಲಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೇ ಇರುವುದರಿಂದ ಬೇಸತ್ತು ಅವರು ಪಕ್ಷೇತರರಾಗಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಂದಿರುವ ಅವರು ಈ ವಾರ್ಡುಗಳಲ್ಲಿ ತಮ್ಮ ಜನಪ್ರಿಯತೆ ಸಾರಿ ಹೇಳಿದ್ದಾರೆ. 

9ನೇ ವಾರ್ಡಿನಲ್ಲಿಯೂ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಕೊರತೆ ಆ ಪಕ್ಷದವರನ್ನು ತೀವ್ರ ಕಾಡಿತ್ತು. ಆದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಧುಮಿಕಿದ್ದ ನಿವೃತ್ತ ಪ್ರಧಾನ ಗುರು ಎಂ. ಎಫ್. ಜಕಾತಿ ಅವರು ಅಚ್ಚರಿ ರೀತಿಯಲ್ಲಿ ವಿಜೇತರಾಗಿದ್ದಾರೆ. ಕಾಂಗ್ರೆಸ್ ಮತಗಳು ಇಲ್ಲಿ ವಿಭಜನೆಯಾಗಿದ್ದರೂ, ಬಿಜೆಪಿ ಮತ ವಿಭಜನೆ ಲಾಭವನ್ನು ಇವರು ಪಡೆದುಕೊಂಡು ಜಯದ ದಡ ಸೇರಿದ್ದಾರೆ. 

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪ್ರಚಾರಕ್ಕೆ ಇಲ್ಲಿಗೆ ಬಂದಾಗ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳಿಗೆ ಹೊಂದಿಕೊಂಡುವಂತೆ ತಾಕೀತು ಮಾಡಿದ್ದರು. ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದ್ದ ಟಿಕೆಟ್ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಜಕಾತಿ ಅವರು ಸ್ಪರ್ಧೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷರ ಮುಂದೆಯೇ ಸೋತರೆ ಮೀಸೆ ಬೋಳಿಸಿಕೊಂಡು ತಿರುಗಾಡುತ್ತೇನೆ ಎಂಬ ಶಪಥವನ್ನು ಮಾಡಿದ್ದರು. ಆದರೆ ಕೊನೆಗೂ ಗೆದ್ದು ತಮ್ಮ ಹಠ ಸಾಧಿಸಿದ್ದಾರೆ. 

ವಿದ್ಯಾಗಿರಿ ಜನರ ವಿರೋಧದ ನಡೆವೆಯೂ ಎರಡನೇ ಬಾರಿ 15 ನೇ ವಾರ್ಡಿನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕಿರಣ ಪಾಟೀಲ ತಿಣುಕಾಡಿ ಜಯ ಸಾಧಿಸಿದ್ದಾರೆ. 'ಅಂಡರ್ ಕರೇಂಟ್' ಎಂದೇ ಭಾವಿಸಲಾಗಿದ್ದ ನಿಂಗಪ್ಪ ಶಿವನಗುಡಿ 38ಮತಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‍ನ ಉಮೇಶ್ವರ ಹೊಂಗಲ ವಿರುದ್ಧ ಕೇವಲ 14 ಮತಗಳ ಅಂತರದ ಪ್ರಯಾಸ ಗೆಲುವನ್ನು ಕಿರಣ ದಾಖಲಿಸಿದ್ದಾರೆ. 

ಬಿಜೆಪಿ ಬಂಡಾಯ ಅಭ್ಯರ್ಥಿ ಕಿರಣ ವಾಳದ ಕೂಡಾ ಇಲ್ಲಿ ಪರಾಭವಗೊಂಡಿದ್ದಾರೆ. ಯಾವುದೇ ವಾರ್ಡಿನಲ್ಲಿ ಸ್ಪರ್ಧಿಸಿದ್ದರೂ ಗೆಲ್ಲುವೆ ಕುದುರೆ ಎಂದು ಕಾಂಗ್ರೆಸ್ ಒಂದು ಬಣ ಭಾವಿಸಿದ್ದ ಆಶ್ಫಾಕ್ ಹವಾಲ್ದಾರ್, ಇದೇ ಮೊದಲ ಬಾರಿ ಕಣಕ್ಕಿಳಿದಿದ್ದ ದೌಲತ್ ಪರಾಂಡೇಕರ ವಿರುದ್ಧ 139 ಮತಗಳಿಂದ ಪರಾಭವಗೊಂಡಿದ್ದಾರೆ. ಪ್ರತಿಯೊಂದು ವಾರ್ಡಿನಲ್ಲಿಯೂ  ಒಂದು ಮತದಿಂದ ಹಿಡಿದು ಗರಿಷ್ಠ 14 ಮತಗಳ 'ನೋಟಾ' ಗುಂಡಿ ಒತ್ತಿ ತಮ್ಮ ಆಕ್ರೋಶ ಮತದಾರÀ ವ್ಯಕ್ತಪಡಿಸಿದ್ದಾರೆ. 

9ಸ್ಥಾನ ಗೆದ್ದಿರುವ ಬಿಜೆಪಿ ಶಾಸಕ ದೊಡ್ಡಗೌಡರ ಬೆಂಬಲದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. 

0/Post a Comment/Comments