‘ಬೆತ್ತಲೆ ಪೂಜೆ.. ಕತ್ತು ಕೊಯ್ದು ಇಬ್ಬರ ಬಲಿ.. ಕೋಟಿ, ಕೋಟಿ ಹಣ!' - Kittur


 ‘ಬೆತ್ತಲೆ ಪೂಜೆ.. ಕತ್ತು ಕೊಯ್ದು ಇಬ್ಬರ ಬಲಿ.. ಕೋಟಿ,ಕೋಟಿ ಹಣ!'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಮೂವರನ್ನು ಬೆತ್ತಲೆ ಮಾಡಿ  ಸ್ವಾಮೀಜಿಯಿಂದ ಪೂಜೆ ಮಾಡಿಸಬೇಕು. ಇವರಲ್ಲಿ ಇಬ್ಬರ ಕತ್ತು ಕೊಯ್ದು ಬಲಿ ಕೊಡಬೇಕು.. ಹೀಗೆ ಮಾಡಿದರೆ ಕೋಟಿ, ಕೋಟಿ ದುಡ್ಡು ಬರುತ್ತದೆ. ಬಂದ ದುಡ್ಡಿನಲ್ಲಿ ನಮಗರ್ಧ, ನಿಮಗರ್ಧ..

ಇಂತಹದ್ದೊಂದು ಖತರ್ನಾಕ್ ವಿಚಾರಕೊಟ್ಟ ಮೂವರು ಈಗ ಬಂಧನಕ್ಕೊಳಗಾಗಿದ್ದಾರೆ. ಒತ್ತಾಯ ಪೂರ್ವಕವಾಗಿ ಮನೆ ಪ್ರವೇಶ ಮಾಡಿ ಈ ದುರ್ವಿಚಾರ ಬಿತ್ತಿರುವುದು ಆತಂಕ ಪಡುವ ಸಂಗತಿಯಾಗಿದೆ.

ಆಗಿದ್ದೇನು?

ಸವದತ್ತಿ ತಾಲೂಕಿನ ಮದ್ಲೂರು ಗ್ರಾಮದ ಗೃಹಿಣಿಯೊಬ್ಬಳ ಮನೆಗೆ ಅಕ್ರಮವಾಗಿ ಪ್ರವೇಶ ಪಡೆದ ಮೂವರು ಆರೋಪಿಗಳು ವೈಯಕ್ತಿಕವಾಗಿ ನಿಮ್ಮ ಬಳಿ ಮಾತನಾಡಬೇಕು ಎಂದು ಪುಸಲಾಯಿಸಿ ಗ್ರಾಮದ ಮಸೀದಿ ಬಳಿ ಕರೆದುಕೊಂಡು ಬಂದಿದ್ದಾರೆ.

ನಿನ್ನ ತಾಯಿ ಮತ್ತು ನಿನ್ನ ಇಬ್ಬರು ಚಿಕ್ಕಮ್ಮರು ಒಂದೇ ನಕ್ಷತ್ರದಲ್ಲಿ ಜನ್ಮ ತಾಳಿದ್ದಾರೆ. ಈ ಮೂವರನ್ನೂ ಊರಿನಿಂದ ಸುಮಾರು 35 ಕಿ. ಮೀ ದೂರದ ಬೆಟ್ಟಕ್ಕೆ ಕರೆದುಕೊಂಡು ಹೋಗಬೇಕು. ಅಲ್ಲಿ ಮೂವರನ್ನು ಬೆತ್ತಲೆ ಮಾಡಬೇಕು. ಅನಂತರ ಸ್ವಾಮೀಜಿಯೊಬ್ಬರಿಂದ ಅವರಿಗೆ ಪೂಜೆ ನೆರವೇರಿಸಬೇಕು. ಅವರಿಗೆ ಮಾಟ, ಮಂತ್ರವನ್ನು ಮಾಡಿಸಬೇಕು. ಅನಂತರ ಇವರಲ್ಲಿ ಇಬ್ಬರ ಕುತ್ತಿಗೆ ಕೊಯ್ಯಬೇಕು. ಹೀಗೆ ಬಲಿ ಕೊಟ್ಟ ನಂತರ ಒಬ್ಬರನ್ನು ಮನೆಗೆ ಕರೆದುಕೊಂಡು ಬರಬೇಕು ಎಂದು ತಿಳಿಸಿದ್ದಾರೆ.

ಇಷ್ಟೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಜೀವಂತ ಇರುವ ಒಬ್ಬರು ಮನೆಗೆ ಬಂದರೆ  ನಿನಗೆ ಕೋಟಿ, ಕೋಟಿ ಲೆಕ್ಕದಲ್ಲಿ ದುಡ್ಡು ಬರುತ್ತದೆ ಎಂದು ಹೇಳಿದ್ದಾರೆ. ಬಂದ ದುಡ್ಡು ನೀನು ಒಬ್ಬಳೇ ತೆಗೆದುಕೊಳ್ಳುವಂತಿಲ್ಲ. ಅದರಲ್ಲಿ ನಮಗೂ ಅರ್ಧ ಪಾಲು ಕೊಡಬೇಕು ಎಂದು ಆರೋಪಿಗಳು ಅಪಾಯಕಾರಿ ವಿಚಾರ ಕೊಟ್ಟಿದ್ದಾರೆ.

ಆತಂಕ ಪಡುವ ಈ ಘಟನೆ ನಡೆದದ್ದು, ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಈ ರೀತಿ ಒತ್ತಾಯ ಮಾಡಿ ಜೀವ ಭಯ ಹುಟ್ಟಿಸಿದ ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದ ಪಾಂಡು ಸೋಮಪ್ಪ ಗುಂಡಲಮನೆ, ಮಾಬ್ನೂರು ಗ್ರಾಮದ ಯಲ್ಲಪ್ಪ ತಿಮ್ಮಪ್ಪ ನರಿ ಹಾಗೂ ಇದೇ ಗ್ರಾಮದ ಗೌಡಪ್ಪ ದೂರನಾಯ್ಕ್ ಪಾಟೀಲ ಎಂಬ ಮೂವರು ಆರೋಪಿಗಳÀನ್ನು ಮುರಗೋಡ ಪೊಲೀಸರು ಡಿ. 7 ರಂದು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದಾರೆ. 

0/Post a Comment/Comments