ಕೆಲಸ ಮಾಡಿದ್ದರೆ ಕುಕ್ಕರ್ ಹಂಚಿ ಏಕೆ ಮತ ಕೇಳ್ತೀರಿ?
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಮಾಡಿದೆ ಎಂದು ಹೇಳುವ ನೀವು ಕುಕ್ಕರ್ ಹಂಚಿ ಏಕೆ ಮತ ಕೇಳ್ತೀರಿ’ ಎಂದು ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕಟುವಾಗಿ ಪ್ರಶ್ನಿಸಿದರು.
ಇಲ್ಲಿಯ ಪಟ್ಟಣ ಪಂಚಾಯ್ತಿಗೆ ಡಿ. 27 ರಂದು ನಡೆಯಲಿರುವ ಚುನಾವಣೆ ನಿಮಿತ್ತ ಗುರುವಾರ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದಲ್ಲಿ ಸುಳ್ಳು ಹೇಳುವವರಿದ್ದಾರೆ’ ಎಂದು ಕುಟುಕಿದರು.
‘ನಿಮ್ಮ (ಕಾಂಗ್ರೆಸ್) ಪಕ್ಷದ ಮಾಜಿ ಶಾಸಕರನ್ನು ಕಿತ್ತೂರಲ್ಲಿ ದೊಡ್ಡ ಬ್ಯಾಟರಿ ಹಚ್ಚಿ ಹುಡುಕಾಡಿದರೂ ಸಿಗುತ್ತಿಲ್ಲ. ಬ್ಯಾಟರಿಯೇ ಡೌನ್ ಆಗುತ್ತದೆ ಹೊರತು, ಅವರು ಇಂದಿಗೂ ಸಿಗುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
‘ಹೆದ್ದಾರಿಗೆ ಹೋಗಿ ನೋಡಿದರೆ ಬಿಜೆಪಿ ಸಾಧನೆಯನ್ನು ಅವು ವರ್ಣಿಸುತ್ತವೆ. ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸುವ ನೀವು ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬನ್ನಿ’ ಎಂದೂ ಸವಾಲು ಹಾಕಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘2 ನೇ ವಾರ್ಡಿನ ಹಿರಿಯರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಯನ್ನಾಗಿ ನಾಗರಾಜ ಅಸುಂಡಿ ಆಯ್ಕೆ ಮಾಡಲಾಗಿದೆ. ಅವರಿಗೆ ಮತ ನೀಡಿ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
‘ಕಿತ್ತೂರು ಅರಮನೆ ಹೇಗಿತ್ತು ಎಂಬ ಕಲ್ಪನೆಗೆ ಪುನರ್ ನಿರ್ಮಾಣದ ಚಿತ್ರಣ ನೀಡುವ ಮಹತ್ವಾಕಾಂಕ್ಷಿ ಕಾರ್ಯ ಪ್ರಗತಿಯಲ್ಲಿದೆ. ದಶಕಗಳ ಕಾಲ ಅಧಿಕಾರಲ್ಲಿದ್ದರೂ ಕಿತ್ತೂರು ಅಭಿವೃದ್ಧಿ ಏಕೆ ಮಾಡಲಿಲ್ಲ. ನಿಚ್ಚಣಕಿ ಮಾರ್ಗದಲ್ಲಿ ಸಂಗ್ರಹವಾಗುವ ಕೊಳಚೆ ನೀರಿನ ಸಮಸ್ಯೆ ಏಕೆ ಬರೆಹರಿಯಲಿಲ್ಲ’ ಎಂದು ಕೇಳಿದರು.
ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ ಮಾತನಾಡಿ, ‘ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಕೇವಲ 3 ವರ್ಷದಲ್ಲಿ ಕಿತ್ತೂರಿನ ಚಿತ್ರಣವನ್ನು ಬದಲಾವಣೆ ಮಾಡಿದ್ದಾರೆ. ದುಷ್ಟ ಕಾಂಗ್ರೆಸ್ ಮಾಡಿದ್ದೇನು’ ಎಂದು ಜನರು ಹೇಳಬೇಕು ಎಂದರು.
ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಸುಭಾಸ ಪಾಟೀಲ, ಕಿತ್ತೂರು ಪ್ರಾಧಿಕಾರ ಸದಸ್ಯ ಉಳವಪ್ಪ ಉಳ್ಳಾಗಡ್ಡಿ, ಜಗದೀಶ ವಸ್ತ್ರದ, ವಿಶ್ವನಾಥ ಬಿಕ್ಕಣ್ಣವರ, ವಿಠ್ಠಲ ಪಾಗಾದ, ಎಸ್. ಆರ್. ಪಾಟೀಲ, ಶ್ರೀಕರ ಕುಲಕರ್ಣಿ, 2 ನೇ ವಾರ್ಡಿನ ಅಭ್ಯರ್ಥಿ ನಾಗರಾಜ ಅಸುಂಡಿ ಉಪಸ್ಥಿತರಿದ್ದರು.
ಶಿವಾನಂದ ಹನುಮಸಾಗರ ಕಾರ್ಯಕ್ರಮ ನಿರೂಪಿಸಿದರು.
Post a Comment