ದೊಡ್ಡಗೌಡರ ದೂರದೃಷ್ಟಿ; ಕಿತ್ತೂರಿಗೆ ಹತ್ತಾರು ಕಾಮಗಾರಿ ಸೃಷ್ಟಿ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕನಸು ಕಾಣುವುದು, ಕಂಡ ಕನಸಿಗೆ ಯೋಜನೆ ರೂಪಿಸುವುದು ಮತ್ತು ಅದನ್ನು ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತರುವುದು, ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಜಾಯಮಾನವಿದು.
ಕಂಡ ಕನಸು ನನಸು ಮಾಡುವ ನಿಟ್ಟಿನಲ್ಲಿ ಸದಾ ಕಾರ್ಯತತ್ಪರತೆ ಮೆರೆಯುವುದು ಅವರ ಹಿರಿಮೆ. ಬ್ರಿಟಿಷರ ವಿರುದ್ಧ ನಡೆದ ದ್ವಿತೀಯ ಯುದ್ಧದಲ್ಲಿ ಭಗ್ನಗೊಂಡ ಅರಮನೆ ಪುನರ್ ನಿರ್ಮಾಣ ಅವರ ಮಹತ್ವಾಕಾಂಕ್ಷಿ ಕನಸು ಮತ್ತು ಯೋಜನೆ. ಇದರ ಅನುಷ್ಠಾನಕ್ಕಾಗಿ ನೀಲನಕ್ಷೆ ಸಿದ್ಧಗೊಂಡಿದೆ. ಇತ್ತೀಚೆಗಷ್ಟೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ವೀಕ್ಷಣೆ ಮಾಡಿದ್ದಾರೆ. ಇನ್ನೇನಿದ್ದರೂ ಕಾರ್ಯರೂಪಕ್ಕೆ ತರುವುದಷ್ಟೇ ಬಾಕಿಯಿದೆ. ಹೊಸ ವರ್ಷಕ್ಕೆ ಹೊಸ ಸಾಧ್ಯತೆಗಳತ್ತ ಕಿತ್ತೂರು ವೇಗದಿಂದ ಹೆಜ್ಜೆ ಹಾಕಲಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
ರೂ. 200 ಕೋಟಿ
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ನಂತರ ಬೃಹತ್ ಮೊತ್ತದ ಅನುದಾನವನ್ನು ಅವರು ತರಲು ಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಸರ್ಕಾರದ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿದೆ. ಹಿಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವಧಿಯಲ್ಲಿ ಕಿತ್ತೂರಿನ ಸಮಗ್ರ ಅಭಿವೃದ್ಧಿ ಮತ್ತು ಐತಿಹಾಸಿಕ ತಾಣಗಳ ಅಭಿವೃದ್ಧಿಪಡಿಸಲು ಪ್ರಾಧಿಕಾರಕ್ಕೆ ರೂ. 200 ಕೋಟಿಯ ಬೃಹತ್ ಅನುದಾನವನ್ನು ಕೇಳಿದ್ದರು ಶಾಸಕ ದೊಡ್ಡಗೌಡರ ಅವರು.
ಇದಕ್ಕೆ ಸಮ್ಮತಿ ನೀಡಿದ್ದ ಬಿಎಸ್‍ವೈ, ಮೊದಲ ಹಂತವಾಗಿ ರೂ. 50 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದರು. ಅಷ್ಟೇ ಅಲ್ಲ, ರೂ. 10 ಕೋಟಿ ಬಿಡುಗಡೆ ಮಾಡಿದ್ದರು. ಈ ಅನುದಾನದಲ್ಲಿ ಇತಿಹಾಸ ಪ್ರಸಿದ್ಧ ಹಿನ್ನೆಲೆಯ ಪಟ್ಟಣದಲ್ಲಿ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ರಾಜಗುರು ಸಂಸ್ಥಾನ ಕಲ್ಮಠದ ಆದಿ ಗುರುಸಿದ್ದೇಶ್ವರರ ಚೌಕೀಮಠಕ್ಕೆ ಹೊಸ ರೂಪು ನೀಡುವುದು. ಅಲ್ಲಿಯೇ ದೊಡ್ಡ ಸಭಾಂಗಣ ನಿರ್ಮಿಸುವುದು ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ದೊರಕಿದೆ.
ಐತಿಹಾಸಿಕ ಈ ಪಟ್ಟಣದ ಸಮಗ್ರ ಅಭಿವೃದ್ಧಿಯ ಪಣ ದೊಡ್ಡಗೌಡರ ಅವರದಾಗಿದೆ. ಇದೊಂದು ಮಾದರಿ ಪ್ರವಾಸಿ ತಾಣವಾಗಿ ಭೂಪಟದಲ್ಲಿ ಕಂಗೊಳಿಸಬೇಕು ಎಂಬುದು ಅವರ ಅಂತರಾಳದ ಬಯಕೆಯಾಗಿದೆ.
Post a Comment