ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ಮಹದಾಯಿ, ಕೃಷ್ಣಾ ನೀರಾವರಿ ಯೋಜನೆ, ಅತಿವೃಷ್ಠಿಯಿಂದಾಗಿರುವ ಬೆಳೆ ಹಾನಿ ಸೇರಿ ಉತ್ತರ ಕರ್ನಾಟಕದ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಗಂಭೀರ ಚರ್ಚೆ ನಿರೀಕ್ಷಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ' ಎಂದು ಅಖಂಡ ಕರ್ನಾಟಕ ರೈತ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಅಸಮಾಧಾನÀ ವ್ಯಕ್ತಪಡಿಸಿದರು.
ತಾಲೂಕಿನ ನಿಚ್ಚಣಕಿ ಗ್ರಾಮದ ಅಪ್ಪೇಶ ದಳವಾಯಿ ಅವರ ಸ್ವಗೃಹದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ಮುಖಂಡರ ಸಭೆ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಪಕ್ಷಭೇದ ಮರೆತು ಈ ಭಾಗದ ಶಾಸಕರೆಲ್ಲರೂ ವಿರೋಧ ಮಾಡಬೇಕಿತ್ತು. ಅದು ಕೂಡಾ ಆಗಲಿಲ್ಲ' ಎಂದು ಬೇಸರಪಟ್ಟರು.
‘ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಿತು. ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರವೂ ಈ ಕಾಯ್ದೆಗಳನ್ನು ವಾಪಸ್ಸು ಪಡೆಯಬಹುದು ಎಂದು ನಂಬಲಾಗಿತ್ತು. ಇವುಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಈ ಬಗ್ಗೆ ಪ್ರತಿ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸಬೇಕಾಗಿದೆ. ಮತ್ತೆ ಹೋರಾಟ ರೂಪಿಸಬೇಕಾಗಿದೆ. ಈ ಕಾರ್ಯವನ್ನು ಅಖಂಡ ಕರ್ನಾಟಕ ರೈತ ಸಂಘ ಮಾಡಲಿದೆ' ಎಂದು ಅವರು ಪ್ರಕಟಿಸಿದರು.
‘ಎಪಿಎಂಸಿ ಕಾನೂನು, ವಿದ್ಯುತ್ ಖಾಸಗೀಕರಣ ಬಗ್ಗೆ ಚರ್ಚಿಸಿ ಇವುಗಳಿಗೆ ತಿಲಾಂಜಲಿ ನೀಡಬಹುದಾಗಿತ್ತು, ಅದೂ ಆಗಲಿಲ್ಲ. ಅತಿವೃಷ್ಟಿಯಿಂದ ಬೆಳೆಹಾನಿ ಆದವರಿಗೆ ರೂ. 13060 ಹಾಗೂ ನೀರಾವರಿ ಆಶ್ರಿತ ಬೆಳೆಗೆ ರೂ. 25 ಸಾವಿರ ಪರಿಹಾರ ನೀಡಲಾಗುವ ಘೋಷಣೆ ಸರ್ಕಾರ ಮಾಡಿದೆ. ಆದರೆ ಇದನ್ನು ಹೇಗೆ ವಿಂಗಡಣೆ ಮಾಡುತ್ತೀರಿ' ಎಂದೂ ಅವರು ಪ್ರಶ್ನಿಸಿದರು.
ಮುಖಂಡರಾದ ಶಿವಾನಂದ ಹೊಳೆಹಡಗಲಿ, ಕಲ್ಲಪ್ಪ ಕುಗಟಿ, ಅಪ್ಪೇಶ ದಳವಾಯಿ, ಮಹಾಂತೇಶ ರಾಹುತ, ಚನ್ನಪ್ಪ ಗಣಾಚಾರಿ, ನಿಂಗಪ್ಪ ನಂದಿ, ನೀಲಕಂಠ ನಿರೊಳ್ಳಿ, ಈರಪ್ಪ ವರಗನ್ನವರ, ಫಕ್ಕೀರಪ್ಪ ದಳವಾಯಿ, ಮಡಿವಾಳೆಪ್ಪ ವರಗನ್ನವರ ಉಪಸ್ಥಿತರಿದ್ದರು.
ಬಾಬಾಗೌಡರ ಪುತ್ಥಳಿ ಅನಾವರಣ ಜ. 6ಕ್ಕೆ
ಚನ್ನಮ್ಮನ ಕಿತ್ತೂರು: ರೈತರಲ್ಲಿ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯ ತುಂಬಿದ ಹೋರಾಟಗಾರ ದಿ. ಬಾಬಾಗೌಡ ಪಾಟೀಲ ಅವರು ಪುತ್ಥಳಿ ಅನಾವರಣ ಕಾರ್ಯಕ್ರಮ ಜ. 6 ರಂದು ಅವರ ಸ್ವಗ್ರಾಮ ಚಿಕ್ಕಬಾಗೇವಾಡಿಯಲ್ಲಿ ನೆರವೇರಲಿದೆ ಎಂದು ಅಖಂಡ ಕರ್ನಾಟಕ ರೈತ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ತಿಳಿಸಿದರು.
ರೈತಸಂಘದ ಎಲ್ಲ ಬಣಗಳಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಎಲ್ಲ ಬಣಗಳ ಒಕ್ಕೂಟ ರಚನೆ ಮಾಡಿ ಹೋರಾಟ ಮಾಡಿದಂತೆ ಇಲ್ಲೂ ಕೂಡಾ ಒಕ್ಕೂಟ ರಚನೆ ಮಾಡುವ ಅಗತ್ಯವಿದೆÉ ಎಂದು ಪ್ರತಿಪಾದಿಸಿದ ಅವರು. ಒಂದಾಗಿ ಹೋರಾಟ ಮಾಡಿದರೆ ಅದಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂದÀರು.
ಪುತ್ಥಳಿ ಅನಾವರಣ ದಿನವೇ ಅಲ್ಲಿ ಆಗಮಿಸುವ ಮುಖಂಡರ ಜೊತೆಗೆ ಚರ್ಚಿಸಿ ರೈತರ ಸಮಸ್ಯೆಗಳ ವಿರುದ್ಧದ ಹೊಸ ಹೋರಾಟಕ್ಕೆ ನಾಂದಿ ಹಾಡಲಾಗುವುದು ಎಂದರು.
Post a Comment