ಬಿಜೆಪಿ ಒಕ್ಕಟ್ಟು: ಕಾಂಗ್ರೆಸ್‍ನಲ್ಲಿ ಬಿಕ್ಕಟ್ಟು - Kittur
ಬಿಜೆಪಿ ಒಕ್ಕಟ್ಟು: ಕಾಂಗ್ರೆಸ್‍ನಲ್ಲಿ ಬಿಕ್ಕಟ್ಟು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾಗಿದ್ದ ಬುಧವಾರ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಬಿಜೆಪಿ ತನ್ನ ಬಲವನ್ನು ಸಾಬೀತು ಪಡಿಸಿದರೆ, ಈ ಪಕ್ಷದ ಭುಜಬಲ ಮುರಿಯುವ ಹಾಗೆ  ಪಣತೊಟ್ಟಂತೆ ಆರಂಭದಲ್ಲಿ ಕಾಣಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು ಕೆಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದರಿಂದ  ಕಾಂಗ್ರೆಸ್ ಪಕ್ಷಕ್ಕೆ ಇದು ಮುಳುವಾಗುವ ಅಪಾಯವಿದೆ    ಎಂದು ವಿಶ್ಲೇಷಿಸಲಾಗುತ್ತಿದೆ. 

ಟಿಕೆಟ್ ಹಂಚಿಕೆಯಲ್ಲಿ ಆಗಿರುವ 'ಡ್ಯಾಮೇಜ್ ಕಂಟ್ರೋಲ್' ಹೇಗೆ ಸರಿ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿ ‘ಡ್ಯಾಮೇಜು ಇಲ್ಲ, ಕಂಟ್ರೋಲ್ ಮಾತು ಎಲ್ಲಿಯದು' ಎನ್ನುತ್ತಿದ್ದಾರೆ. ತೀರಾ ಢಾಳಾಗಿ ಕಂಡು ಬಂದಿರುವ ಈ ಡ್ಯಾಮೇಜು ಚುನಾವಣೆಯಲ್ಲಿ ಕೆಲ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಡ್ಯಾಮೇಜ್ ಮಾಡದೆ ಬಿಡಲಾರದು ಎಂಬ ಮಾತುಗಳು ಅನೇಕ ಕಡೆಗಳಲ್ಲಿ ಮಾರ್ದನಿಸುತ್ತಿವೆ.

ಸರಿಪಡಿಸಬಹುದಿತ್ತು

ಕಾಂಗ್ರೆಸ್   ಕಾರ್ಯಕರ್ತರಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನವನ್ನು ಜಿಲ್ಲೆಯಿಂದ ಆಗಮಿಸಿದ್ದ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ವಿಧಾನಸಭೆ ಮತಕ್ಷೇತ್ರದ ವೀಕ್ಷಕ ಬಂಣಾರೇಶ   ಹಿರೇಮಠ ತಣಿಸಬಹುದಿತ್ತು. ಅವರೂ ಇದಕ್ಕೆ ಮುಂದಾಗಲಿಲ್ಲ. ಕಾಂಗ್ರೆಸ್‍ನಲ್ಲಿಯ ಶೀತಲ ಸಮರದ ಆರಂಭವು ಶಾಸಕರಾದಿಯಾಗಿ ಬಿಜೆಪಿಯ ನಾಯಕರು ಹಾಗೂ ಅಭ್ಯರ್ಥಿಗಳಲ್ಲಿ ಹೆಚ್ಚಿನ ಸಂತಸ ಮತ್ತು ಹೆಚ್ಚು ಸ್ಥಾನಗಳ ಗೆಲುವಿನ ನಿರೀಕ್ಷೆಯನ್ನು ಹುಟ್ಟು ಹಾಕಿರುವುದಂತೂ ಸುಳ್ಳಲ್ಲ.

ಬಿಜೆಪಿಯ ವಿಜಯದ ಅಶ್ವಮೇಧ ಕುದುರೆಯನ್ನು  ಕಟ್ಟಿ ಹಾಕುವ   ಸೂಚನೆಯನ್ನು ಕಾಂಗ್ರೆಸ್ ಪಕ್ಷದ  ಪ್ರಮುಖರು ಮತ್ತ ಕಾರ್ಯಕರ್ತರು   ನೀಡಿದ್ದ ಸೂಚನೆ ಈಗ ಕನ್ನಡಿಯೊಳಗಿನ ಗಂಟಿನಂತೆ ಕಾಣಿಸುತ್ತಿದೆ. ಬಣಗಳ ಮಧ್ಯೆ ಇಲ್ಲಿಯವರೆಗೆ ಹೊಗೆಯಾಡುತ್ತಲೇ ಬಂದಿದ್ದ ಅಸಹನೆಯು,  ಕೆಲ ಘೋಷಿತ ಅಥವಾ ವಾಗ್ದಾನ ಮಾಡಿದ್ದ ಅಭ್ಯರ್ಥಿಗಳ ಟಿಕೆಟ್ ತಪ್ಪಿಸುವ ಮೂಲಕ ಈ ಮಾತಿಗೆ  ಪುಷ್ಟಿಯನ್ನೂ  ನೀಡಿದಂತಾಗಿದೆ.    ‘ಡ್ಯಾಮೇಜ್ ಇಲ್ಲ' ಎಂಬ ಕಾಂಗ್ರೆಸ್ ಮುಖಂಡರ ಅವಲೋಕಿಸದ, ಅಲಕ್ಷಿತ ಮಾತಿಗೆ ಈ ಚುನಾವಣೆಯಲ್ಲಿ ಉತ್ತರವೂ ಸಿಗಲಿದೆ ಎಂದು ಹೇಳಲಾಗುತ್ತಿದೆ.

 

0/Post a Comment/Comments