ಮಹಾಂತೇಶ ಕಂಬಾರ ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಶತಮಾನದ ಅಂಚಿನಲ್ಲಿರುವ ‘ಪ್ರಜ್ಞಾವಂತರ ಮನೆ, ಚಿಂತಕರ ಚಾವಡಿ’ ಎಂದೇ ನಾಡಿನ ವೈಚಾರಿಕ ವಲಯದಲ್ಲಿ ಅಚ್ಚೊತ್ತಿರುವುದು ವಿಧಾನ ಪರಿಷತ್ತು. ಈಗದರ ಪ್ರವೇಶಕ್ಕೆ ನಡೆಯುತ್ತಿರುವ ಚುನಾವಣೆಯು ದುಡ್ಡಿನ ಬಲ ಇದ್ದವರ ಬಹುದೊಡ್ಡ ಆಖಾಡವಾಗಿ ಬದಲಾಗಿದೆ. ಅರಿತವರ ಆರೋಗ್ಯಕರ ಚರ್ಚೆಯ ತಾಣದ ಪ್ರವೇಶಕ್ಕೂ ಝಣ, ಝಣ ಕಾಂಚಾಣ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಸದ್ದು ಮಾಡಿತು. ಈ ಮೂಲಕ ಪ್ರಜ್ಞಾವಂತರ ಮನೆಯ ಮೂಲ ಆಶಯವನ್ನೇ ಸಮಾಧಿ ಮಾಡಿ ಹಾಕಿತು!
ವಿಧಾನಸಭೆಯಲ್ಲಿ ಅನುಷ್ಠಾನವಾದ ಕಾಯ್ದೆಗಳನ್ನು ಈ ‘ಚಿಂತಕರ ಚಾವಡಿ'ಯಲ್ಲಿ ಒರಗೆ ಹಚ್ಚಿ ಅವುಗಳ ಸಾಧಕ-ಬಾಧಕ ಬಗ್ಗೆ ಚರ್ಚೆ ಮಾಡಿ, ಜಾರಿಗೆ ಹಸಿರು ನಿಶಾನೆ ತೋರಿಸುವ ಬುದ್ಧಿಜೀವಿಗಳು ಮೊದಲು ಅಲ್ಲಿದ್ದರು. ವರ್ತಮಾನದಲ್ಲಿ ಪ್ರವೇಶ ಪಡೆಯಲು ನಡೆಯುವ ಚುನಾವಣೆಯಲ್ಲಿ ದುಡ್ಡಿದ್ದವರು ಹಾಗೂ ಆರೋಪದ ಹಿನ್ನೆಲೆಯುಳ್ಳವರು ಸ್ಪರ್ಧಿಸಿ, ಗೆಲ್ಲುತ್ತಿರುವುದು ಚಿಂತಕರ ಚಾವಡಿಯ ಕಗ್ಗೊಲೆ ಎಂದು ಕೂಗಿ ಹೇಳುವಂತಾಗಿರುವುದು ದುರ್ದೈವ.
ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಪ್ರತಿನಿಧಿಯೊಬ್ಬರಿಗೆ ಮತ ಹಾಕಲು ಇಸ್ತ್ರೀ
ಪೆಟ್ಟಿಗೆ, ಚಿನ್ನದುಂಗರ, 50 ಸಾವಿರದಿಂದ ಲಕ್ಷದವರೆಗೆ ಕಾಸನು ಬೀಸುವ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಇಸಿದುಕೊಳ್ಳುವರು ಮತ್ತು ಕೊಡುವವರು ವ್ಯವಸ್ಥೆಯನ್ನು ಎಷ್ಟು ಮಾಲಿನ್ಯದ ಪಾತಾಳಕ್ಕೆ ತಳ್ಳಿದ್ದಾರೆ ಎಂದು ಕ್ಷಣ ಯೋಚಿಸಿದರೆ ಹೇಸಿಗೆ ಹುಟ್ಟಿಸುತ್ತದೆ. ಅಷ್ಟೇ ಅಲ್ಲ ಭವಿಷ್ಯದ ಬಗ್ಗೆ ಭಯವೂ ಆವರಿಸುತ್ತದೆ.
ಮೊನ್ನೆ ನಡೆದ ಪರಿಷತ್ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಅಣಕಿಸುವ ಕ್ರಿಯೆಗಳು ನಡೆದಿರುವುದು ಬಹಿರಂಗ ಗುಟ್ಟಾಗಿದ್ದರೂ, ಇದರ ಮೇಲೆ ನಿಗಾ ಇಡಬೇಕಿದ್ದ ಚುನಾವಣೆ ಆಯೋಗವು ದಿವ್ಯ ಮೌನವಹಿಸಿರುವುದು, ಈ ಕೆಟ್ಟ ವ್ಯವಸ್ಥೆಯ ಕವಚದಡಿ ಆಯ್ಕೆಯಾಗಿ ಅಧಿಕಾರದ ಗದ್ದುಗೆ ಮೇಲೆ ಪವಡಿಸುವವರ ಮುಂದೆಯೇ ಕ್ರಮ ತೆಗೆದುಕೊಳ್ಳಲು ಅಂಗಲಾಚುವ ದೈನೇಸಿ ಪರಿಸ್ಥಿತಿ ನಿರ್ಮಾಣವಾಗಿರುವುದು ಅದರ ದುರಂತ.
ಯುವಶಕ್ತಿ ರಾಜಕೀಯ ರಂಗಕ್ಕೆ ಬರಬೇಕು. ಅವರ ಮೂಲಕ ಹೊಸ ಆರೋಗ್ಯಕರ ಆಲೋಚನೆಗಳು ನವಕರ್ನಾಟಕ ನಿರ್ಮಾಣಕ್ಕೆ ಬೀಜ, ಗೊಬ್ಬರವಾಗಬೇಕು ಎಂಬ ಆಶಯವು ಇಂಥ ಕೆಟ್ಟ ಚಟುವಟಿಕೆಗಳಿಂದ ಗೋರಿ ಸೇರುತ್ತಿದೆ. ಪರಿಷತ್ತು ಎನ್ನುವ ರಾಜಕೀಯ ನದಿಯಲ್ಲಿ ಈಸಿ ಜೈಸದವರಿಗೆ ಮತ್ತೊಂದು ರಕ್ಷಿತ ತಾಣ ಕಲ್ಪಿಸಿಕೊಡುವ, ಈ ಮೂಲಕ ರಾಜಕೀಯ ವಿಕೃತ ಕೇಕೆ ಹಾಕಿ ಜನತಾ ಜನಾರ್ದನ ಎದುರು ಗಹಗಹಿಸಿ ನಗುವ ವೇದಿಕೆಯಾಗಿದ್ದು ನೋಡಿದರೆ ಪ್ರಜ್ಞಾವಂತರ ಕರುಳ ಬಳ್ಳಿಯೊಳಗೆ ಪಾತಾಳಗರಡಿ ಆಡಿಸಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಮೂಲ ಆಶಯ ಅಣಕಿಸುವ ಕ್ರಿಯೆ ಅಲ್ಲದೇ ಮತ್ತೇನಿದು?
ಚುನಾವಣಾ ರಾಜಕಾರಣದಲ್ಲಿ ಮೊದಲು ಭ್ರಷ್ಟಾಚಾರವೇ ವಿರೋಧ ಪಕ್ಷಗಳ ಪ್ರಮುಖ ಪಾಶುಪತಾಸ್ತ್ರವಾಗಿತ್ತು. ಅದು ಸವೆದು ಹೋಗಿದೆ. ಈ ವಾಗ್ಬಾಣ ಪ್ರಯೋಗಿಸುವ ಮುನ್ನ ಪಠಿಸುತ್ತಿದ್ದ ಪ್ರಮಾಣಿಕತೆ ಮಂತ್ರ ನೆನಪಿಗೇ ಬರುತ್ತಿಲ್ಲ. ಹೀಗಾಗಿ ರಾಜಕಾರಣಿ ಕುಟುಂಬ ರಾಜಕಾರಣದ ಮತ್ತೊಂದು ಅಸ್ತ್ರ ಪ್ರಯೋಗಿಸಲು ಪ್ರಾರಂಭಿಸಿದ. ಇದು ಸಹ ಸವೆದು ಹೋಯಿತು. ಎಲ್ಲ ರಾಜಕೀಯ ಪಕ್ಷಗಳ ಮನೆಗಳಲ್ಲೂ ಕುಟುಂಬ ರಾಜಕಾರಣ ಎದ್ದು ಕಣ್ಣಿಗೆ ರಾಚುತ್ತಿದೆ. ಇದಾದ ಮೇಲೆ ಲೈಂಗಿಕ ಕ್ರಿಯೆಯ ಆರೋಪದ ಅಸ್ತ್ರ ಕೈಗೆತ್ತಿಕೊಂಡ. ‘ಹೌದು, ನಾನೇ ಅದನ್ನು ಮಾಡಿದ್ದು’ ಎಂದು ನಿರ್ಲಜ್ಜವಾಗಿ ಧ್ವನಿಯೆತ್ತಿ ಇದನ್ನೂ ರಾಜಕಾರಣಿಗಳು ಹೇಳುವಂತಾಗಿದೆ. ಆತನ ಮಾತಿಗಿಂದು ಗೌರವ ಉಳಿದಿಲ್ಲ, ಗಂಭೀರತೆಯ ಜತೆಗೆ ಮಾನ, ಮರ್ಯಾದೆಯೂ ಇಲ್ಲವಾಗಿ ಹೋಗಿದೆ.
ರಾಜಕೀಯ ಸೇವಾಕ್ಷೇತ್ರವನ್ನು ಬಂಡವಾಳ ಹೂಡುವ ರಂಗವನ್ನಾಗಿ ಮಾಡಿರುವ ಇಡೀ ವ್ಯವಸ್ಥೆಯ ಬಗ್ಗೆ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರಾದರೂ ಕುಳಿತು ಯೋಚಿಸುವ ಸಂದರ್ಭ ಬಂದೊದಗಿದೆ.
ಪರಿಷತ್ತಿಗೆ ಹಿಂದಿನ ವೈಭವ ಮರಳಿ ತರುವ ಗಂಭೀರ ಯೋಚನೆ ಮಾಡುವ, ಕಗ್ಗತ್ತಲು ತುಂಬಿದ ತಿರುವಿನಲ್ಲಿ ಪುಟ್ಟ ದೀಪ ಹಚ್ಚುವ ಪ್ರಯತ್ನ ಇನ್ನಾದರೂ ನಡೆಯಬೇಕಿದೆ.
ಲೇಖಕರು: ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
Post a Comment