ಮತದಾರ ಪಟ್ಟಿ ಲೋಪ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯ್ತಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಬೇರೆ ವಾರ್ಡಿನಲ್ಲಿ ಸೇರಿಸಲಾಗಿದ್ದು, ಇದನ್ನು ಆಯಾ ವಾರ್ಡಿಗೆ ಬದಲಾಯಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಶಿವಯೋಗಿ ಹಿರೇಮಠ ಎಚ್ಚರಿಕೆ ನೀಡಿದರು.
ಶುಕ್ರವಾರ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 11 ಮತ್ತು 12 ವಾರ್ಡಿನಲ್ಲಿ ಈ ಬದಲಾವಣೆ ಮಾಡಲಾಗಿದೆ. ಕೂಡಲೇ ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಇರುವುದು ಒಂದು ವಾರ್ಡಿನ ವ್ಯಾಪ್ತಿಯಲ್ಲಿ. ಮತ ನೀಡುವುದು ಬೇರೆ ವಾರ್ಡಿನ ಅಭ್ಯರ್ಥಿಗೆ ಅಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ನಮ್ಮ ವಾರ್ಡಿನ ಅಭ್ಯರ್ಥಿಗೆ ನಾವು ಮತಹಾಕುವ ಅಧಿಕಾರ ಕಸಿದುಕೊಂಡವರ ಮೇಲೆ ಕ್ರಮ ಜರುಗಿಸಬೇಕು ಎಂದೂ ಒತ್ತಾಯಿಸಿದರು.
ಮತದಾರರನ್ನು ಬೇರೆ ವಾರ್ಡಿಗೆ ಸೇರಿಸುವ ಹುನ್ನಾರ ರೂಪಿಸಿದವರು ಯಾರು? ಅವರ ತಾಳಕ್ಕೆ ಕುಣಿದ ಅಧಿಕಾರಿ ಯಾರು? ಎಂದು ಖಾರವಾಗಿ ಪ್ರಶ್ನಿಸಿರುವ ಅವರು, ನಮ್ಮ ಹೆಸರು ನಮ್ಮ ವಾರ್ಡಿನಲ್ಲಿ ಸೇರ್ಪಡೆಯಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳು ಮಾಡಿರುವ ಪ್ರಮಾದ ಖಂಡಿಸಿ ಮತದಾನದಿಂದ ದೂರ ಉಳಿಯುವುದಾಗಿ ಅವರು ಪುನರುಚ್ಛರಿಸಿದರು.
ಕೃಷ್ಣ ರಾಥೋಡ, ಕುಮಾರ ರಾಥೋಡ, ಸುಭಾಸ ಗೂರನವರ, ಫಕ್ಕೀರ ಗುಂಜಿ, ಕಾರ್ತಿಕ ಬಡಿಗೇರ, ಅಕ್ಷಯ ಹಿರೇಮಠ, ರಾಮಚಂದ್ರ ಪೂಜೇರ, ಸಚಿನ್ ಕರನಾಚಿ, ಮಹೇಶ ಗುಂಜಿ, ಪ್ರಮೋದ ಮಾದಾರಿ, ಮಂಜುನಾಥ ಕಂಬಾರ ಉಪಸ್ಥಿತರಿದ್ದರು.
Post a Comment