ಚುನಾವಣೆಗೆ ಕಾಂಗ್ರೆಸ್‍ನಿಂದ ಪ್ರಣಾಳಿಕೆ ಬಿಡುಗಡೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸ್ಥಳೀಯ ಪಟ್ಟಣ ಪಂಚಾಯ್ತಿ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷವು ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಸಮಗ್ರ ಕಿತ್ತೂರು ಪಟ್ಟಣ ಅಭಿವೃದ್ಧಿಗೆ ಹಲವಾರು ಘೋಷಣೆಗಳನ್ನು ಮಾಡಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ನೆರವೇರಿದ ನಂತರ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಒಮ್ಮತದ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಎಲ್ಲ ಪಕ್ಷಗಳಲ್ಲಿ ಗುಂಪುಗಾರಿಕೆ ಇರುವುದು ಸಾಮಾನ್ಯವಾಗಿದೆ. ಎಲ್ಲರ ಭಿನ್ನಾಭಿಪ್ರಾಯಗಳನ್ನು ಸರಿ ಮಾಡಿದ್ದೇವೆ. ಒಕ್ಕಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.
ಕಿತ್ತೂರು ಪಟ್ಟಣ ಪಂಚಾಯ್ತಿಯನ್ನು ಮಾದರಿ ಪಂಚಾಯ್ತಿಯಾಗಿ ರೂಪಿಸಲಾಗುವುದು. ಬಿಡುಗಡೆ ಮಾಡಿರುವ ಪ್ರಣಾಳಿಕೆ ಈಡೇರಿಸಲು ಜಿಲ್ಲಾ ಮುಖಂಡರು ಸಹ ಬೆಂಬಲ ನೀಡಲಿದ್ದಾರೆ ಎಂದರು.
ಕೆಪಿಸಿಸಿ ವೀಕ್ಷಕ ಬಂಗಾರೇಶ ಹಿರೇಮಠ ಮಾತನಾಡಿ, ಒಂದನೆಯ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ತೆರಳಿದ್ದರು. ತಾಂತ್ರಿಕ ಕಾರಣದಿಂದಾಗಿ ಸಲ್ಲಿಸಲಾಗಲಿಲ್ಲ. ಹೀಗಾಗಿ ಪಕ್ಷೇತರÀ ಅಭ್ಯರ್ಥಿ ಜೈ ಸಿದ್ಧರಾಮ ಮಾರಿಹಾಳ ಅವರಿಗೆ ಬೆಂಬಲ ಸೂಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕಿತ್ತೂರು ಪಟ್ಟಣ ಪಂಚಾಯ್ತಿ ಕರ ಪದ್ಧತಿ ಅವೈಜ್ಞಾನಿಕವಾಗಿದೆ. ಪಕ್ಷ ಆಡಳಿತಕ್ಕೆ ಬಂದ ನಂತರ ಅದನ್ನು ಸರಿಪಡಿಸಲಾಗುವುದು. ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಬಾಬಾಸಾಹೇಬ ಪಾಟೀಲ. ಹಬೀಬ ಶಿಲೇದಾರ ಮಾತನಾಡಿದರು. ಜಿಲ್ಲಾ ವೀಕ್ಷಕ ಜಗದೀಶ ಸಾವಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಮುದಕಪ್ಪ ಮರಡಿ, ಸಯ್ಯದ ಮನ್ಸೂರ, ರಮೇಶ ಮೊಕಾಶಿ ಉಪಸ್ಥಿತರಿದ್ದರು.
Post a Comment