‘ಎಷ್ಟು ಮಾತಾಡ್ತಾರ ಇವ್ರು: ಇವ್ರಿಗೆ ವೋಟೇ ಇಲ್ಲಾ’
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ಎಷ್ಟ್ ಮಾತಾಡ್ತಾನ್ಲೇ ಇಂವ, ಇವುಂದ್ ವೋಟೇ ಇಲ್ಲ' ಎನ್ನುವುದನ್ನು ಕೇಳಿದ್ದೇವೆ. ‘ಏನ್ ಮಾಡ್ತಿ.. ನಿಂದ್ ವೋಟ್ ಇಲ್ಲ.. ಗಂಡ್ಸ್ ಇದ್ರ ನನ್ನ ಸೋಲ್ಸು ನೋಡೋಣ..' ಎಂದು ಸವಾಲ್ ಹಾಕೋದನ್ನ ಪಂಚಾಯ್ತಿ ಚುನಾವಣೆಯಲ್ಲಿ ನೋಡಿದ್ದೇವೆ..
ಆದ್ರ ಇಲ್ಲಿ ಹಾಗಿಲ್ಲ. ಮತದಾರರ ಪಟ್ಟಿಯಲ್ಲಿ ಇಲ್ಲದವರೇ ಇಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತ ಇಲ್ಲದವರೇ ಇಲ್ಲಿ ಹೆಚ್ಚು ಮಾತಾಡ್ತಾ ಇದ್ದಾರೆ..!
ಹೌದು, ಇದು ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಮಾತ್ರ ಸಾಧ್ಯವೇನೋ..? ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಅಷ್ಟೇ ಅಲ್ಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರಿರಬೇಕು. ಆದರೆ ಚುನಾವಣೆಯ ಈ ನಿಯಮಾವಳಿಗೆ ಮತ್ತು ಆಶಯಕ್ಕೆ ವಿರುದ್ಧವಾಗಿ ನಡೆಯುವುದೆಂದರೆ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆ ಮಾತ್ರವೇನೋ!
ಈ ನಿಯಮ ಇದ್ದದ್ದರಿಂದಲೇ ಯಾರೋ ಹಣವಂತರು, ‘ಹೆಸರು (ಮತದಾರ ಪಟ್ಟಿಯಲ್ಲಿ)ಇಲ್ಲದವರು' ಹೆಸರು ಬಹಳವಿದೆ ಎಂದು ಕೂಗಾಡುತ್ತ ಚುನಾವಣೆ ಮಾಡುವುದನ್ನು ಕಾಣುತ್ತಿದ್ದೇವೆ. ಇದು ಪ್ರಜಾಪ್ರಭುತ್ವದ ಸೊಬಗೋ, ವ್ಯಂಗ್ಯವೋ ಎಂಬುದನ್ನು ಸಂವಿಧಾನ ತಜ್ಞರು ಹೇಳಬೇಕು..
ಏಕಿಂಥ ನಿಯಮವನ್ನು ನಮ್ಮನ್ನಾಳುವವರು ಮಾಡಿದ್ದಾರೋ ಗೊತ್ತಿಲ್ಲ. ‘ಪಾಪ, ಸ್ಥಳೀಯ ಸಂಸ್ಥೆ ಇಲೆಕ್ಷನ್ದಾಗ ಮೆಂಬರ್ಗೋಳು ಭಾಳ್ ರೊಕ್ಕಾ ಖರ್ಚ್ ಮಾಡಿ ಆರಿಸಿ ಬಂದಿರ್ತಾರು, ಬಂದಷ್ಟ್ ಖರ್ಚಾನ್ನಾದ್ರೂ ಇಂಥವರಿಂದ
ಇ(ಕ)ಸಿದುಕೊಳ್ಳಲಿ' ಎಂದು ಮಾಡಿದ್ದಾರೋ ಗೊತ್ತಿಲ್ಲ..!