ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕಿತ್ತೂರು ಪಟ್ಟಣ ಪಂಚಾಯ್ತಿಯ 18 ಮತ್ತು ಎಂ. ಕೆ. ಹುಬ್ಬಳ್ಳಿ 11 ಸ್ಥಾನಗಳಿಗೆ ಡಿ. 27 ರಂದು ಮುಂಜಾನೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ವ್ಯವಸ್ಥಿತ ಮತ್ತು ಶಾಂತಿಯುತ ಮತದಾನ ನಡೆಸಲು ತಾಲೂಕು ಆಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ತಿಳಿಸಿದರು.
ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿ 'ಕಿತ್ತೂರಲ್ಲಿ 18 ಮತಗಟ್ಟೆ ಹಾಗೂ ಎಂ. ಕೆ. ಹುಬ್ಬಳ್ಳಿಯಲ್ಲಿ 11 ಮತಗಟ್ಟೆ ಸ್ಥಾಪಿಸಲಾಗಿದೆ. ಎಂ. ಕೆ. ಹುಬ್ಬಳ್ಳಿಯ 14 ಸ್ಥಾನಗಳಲ್ಲಿ ಈಗಾಗಲೇ ಮೂವರು ಪಕ್ಷೇತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ' ಎಂದು ತಿಳಿಸಿದರು.
ಎಂ. ಕೆ. ಹುಬ್ಬಳ್ಳಿ 9 ಹಾಗೂ ಕಿತ್ತೂರಲ್ಲಿ 11 ಸೂಕ್ಷ್ಮ ಮತಗಟ್ಟೆಗಳಿವೆ. ಕಿತ್ತೂರಲ್ಲಿ ಒಟ್ಟು 14005 ಮತದಾರರಿದ್ದಾರೆ. ಇವರಲ್ಲಿ 7065 ಮಹಿಳೆಯರು ಮತ್ತು 6940 ಪುರುಷ ಮತದಾರರು ಇದ್ದಾರೆ. ಎಂ. ಕೆ. ಹುಬ್ಬಳ್ಳಿಯಲ್ಲಿ 8235 ಮತದಾರರಿದ್ದಾರೆ. ಇವರಲ್ಲಿ 4149 ಪುರುಷರು, 4086 ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮತಯಂತ್ರಗಳನ್ನು ಸಂಗ್ರಹಿಸಿ ಇಡಲಾಗುವುದು. ಡಿ. 30 ರಂದು ಕಿತ್ತೂರು ಮತ್ತು ಎಂ. ಕೆ. ಹುಬ್ಬಳ್ಳಿಯ ಪಟ್ಟಣಗಳ ಮತದಾನದ ಎಣಿಕೆ ನಡೆಯಲಿದೆ ಎಂದರು.
ಚುನಾವಣೆ ನಿಮಿತ್ತ ಎರಡೂ ಪಟ್ಟಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಸಿಪಿಐ ಮಂಜುನಾಥ ಕುಸುಗಲ್ ತಿಳಿಸಿದರು.
ಮೂವರಲ್ಲೂ ಪೈಪೋಟಿ
ಕಿತ್ತೂರು ಪಟ್ಟಣ ಪಂಚಾಯ್ತಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ಹಣಾಹಣಿ ಕಂಡು ಬಂದಿದೆ. ಕೆಲವು ವಾರ್ಡುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ.
ಎಂ. ಕೆ. ಹುಬ್ಬಳ್ಳಿಯಲ್ಲಿ 11 ವಾರ್ಡುಗಳಲ್ಲಿಯೂ ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆಯಿದೆ. ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇಲ್ಲಿ ನಿಲ್ಲಿಸಿಲ್ಲ.
ಸಂತೆ ರದ್ದು
ಚುನಾವಣೆ ನಿಮಿತ್ತ ಎರಡೂ ಪಟ್ಟಣಗಳÀಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಯನ್ನು ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ.
Post a Comment