ಪ್ರೆಸ್‍ಕ್ಲಬ್ ವಾರ್ತೆ
ಎಂ. ಕೆ. ಹುಬ್ಬಳ್ಳಿ: ನೆರೆಯ ಬೈಲಹೊಂಗಲ ತಾಲೂಕಿನ ಕೊನೆಯ ಹಳ್ಳಿ ಹೊಳಿನಾಗಲಾಪುರ ಗ್ರಾಮಕ್ಕೆ ಸ್ಮಶಾನ ಭೂಮಿ ಸೌಲಭ್ಯವಿಲ್ಲದೆ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ತಾಪತ್ರಯ ಪಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಆಡಳಿತದ ಗಮನಕ್ಕೆ ಹಲವಾರು ಬಾರಿ ಈ ಸಮಸ್ಯೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಮೃತಪಟ್ಟವರ ಮನೆಯ ಹಿತ್ತಲಿನಲ್ಲಿ ಜಾಗೆಯಿದ್ದರೆ ಅಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಬೇಕು. ಇಲ್ಲದಿದ್ದರೆ ರಸ್ತೆ ಬದಿಗೆ ಅಂತ್ಯಕ್ರಿಯೆ ಮಾಡಬೇಕಾದ ದಾರುಣ ಸ್ಥಿತಿ ಇಲ್ಲಿದೆ ಎಂದು ಹೇಳುತ್ತಾರೆ ಗ್ರಾಮಸ್ಥರು.
ಪ್ರತಿ ಊರಿಗೆ ಸ್ಮಶಾನ ಭೂಮಿ ಒದಗಿಸಬೇಕು ಎಂದು ಸರ್ಕಾರ ಕಟ್ಟಪ್ಪಣೆ ಮಾಡಿದ್ದರೂ ಇಲ್ಲಿ ಈ ಸೌಲಭ್ಯದಿಂದ ಗ್ರಾಮ ವಂಚಿತವಾಗಿದೆ. ಸತ್ತವರನ್ನು ರಸ್ತೆ ಅಕ್ಕ-ಪಕ್ಕ ಸಮಾಧಿ ಮಾಡಬೇಕೆ ಎಂದೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸರ್ಕಾರ ಅಥವಾ ತಾಲೂಕು ಆಡಳಿತ ಈ ಸಮಸ್ಯೆಯನ್ನು ಮಾನವೀಯತೆ ದೃಷ್ಟಿಯಿಂದಲೂ ಕಾಣಬೇಕಿದೆ. ಮೃತಪಟ್ಟವರು ಸ್ವರ್ಗಕ್ಕೆ ಹೋಗುತ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ ಅವರ ಅಂತ್ಯಕ್ರಿಯೆ ಮಾಡುವುದಕ್ಕೆ ನರಕಯಾತನೆಯನ್ನಂತೂ ಇಲ್ಲಿಯ ಮೃತಪಟ್ಟ ಕುಟುಂಬದವರು ಅನುಭವಿಸಬೇಕಾಗಿದೆ. ಸರ್ಕಾರ ಈ ಗ್ರಾಮದ ಸಮಸ್ಯೆಯ ಬಗ್ಗೆ ತಾಯಿಕರುಳನಿಂದ ನೋಡಬೇಕಿದೆ. ಸತ್ತವರ ಸಂಸ್ಕಾರಕ್ಕೆ ಒಂದು ನಿಗದಿತ ಜಾಗೆಯ ಸೌಲಭ್ಯ ಮಾಡಿಕೊಡಬೇಕು ಎಂದು ಸಾಮಾಜಿಕ ಹೋರಾಟಗಾರ ಬಸವರಾಜ್ ಆಗ್ರಹಿಸಿದ್ದಾರೆ.
Post a Comment