ಕಿತ್ತೂರು ಸಾಯಿ ಮಂದಿರದಲ್ಲಿ ಕಾರ್ತೀಕ ಸಂಭ್ರಮ - Kittur

 ‘ಆಧ್ಯಾತ್ಮಿಕ ಬೀಡು; ಭಾರತ ನಾಡು'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಅಭಿವೃದ್ಧಿ ಶೀಲ ದೇಶದ ಜೊತೆಗೆ ಆಧ್ಯಾತ್ಮಿಕ ನಾಡು ಎಂದು ಭಾರತ ಗುರುತಿಸಿಕೊಂಡಿದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ಎಸ್. ಬಿ. ದಳವಾಯಿ ಹೇಳಿದರು.

ಇಲ್ಲಿಯ ಸಾಯಿಬಾಬಾ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ತೀಕ ಮಾಸ ದೀಪೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ತೀಕ ಮಾಸವು ಸಾಲು ಸಾಲು ದೀಪ ಬೆಳಗಿಸುವ ಬೆಳಕಿನ ಹಬ್ಬವಾಗಿದೆ. ಅಮಾವಾಸ್ಯೆಯ ಕತ್ತಲನ್ನು ಹೊಡೆದೋಡಿಸಿ ಮನೆ, ಮನಗಳನ್ನು ಬೆಳಗಿಸುವ ಸಡಗರದ ಹಬ್ಬವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ತೀಕ ಮಾಸದ ಪ್ರಧಾನ ದೇವತೆಗಳೆಂದರೆ ವಿಷ್ಣು, ಶಿವ ಮತ್ತು ತುಳಸಿ. ಮನೆ, ಮಂದಿರದಲ್ಲಿ ನಿತ್ಯ ರಂಗೋಲಿ ಹಾಕಿ ಬಜನೆ ಮಾಡಿ ಸುಖ ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ದೀಪ ಬೆಳಗಿಸಿ ಭಗವಂತನನ್ನು ಆರಾಧಿಸಲಾಗುತ್ತದೆ ಎಂದು ವಿವರಿಸಿದರು.

ಬಾಬಾ ಅವರನ್ನು ಸಂತ, ಫಕೀರ ಮತ್ತು ಸದ್ಗುರು ನಾಮದಿಂದ ಕರೆಯಲಾಗುತ್ತಿತ್ತು. ಸಾಯಿ ಬಾಬಾರು ಭಾರತದ ಉದ್ದಗಲಕ್ಕೂ ಸರ್ವಕಾಲಿಕ ಆಧ್ಯಾತ್ಮಿಕ ಗುರುವಾಗಿ ಹೊರಹೊಮ್ಮಿದ್ದಾರೆ. ಭಕ್ತ ಸಮೂಹಕ್ಕೆ ಜೀವನದ ಏರಿತಗಳು, ಮಾನವೀಯ ಮೌಲ್ಯಗಳು, ಕರ್ತವ್ಯ, ನಿಷ್ಠೆಗಳ ಬಗೆಗೆ ಜಾಗೃತಿ ಮೂಡಿಸಿದ ಶ್ರೇಷ್ಠ ಗುರುವಾಗಿದ್ದಾರೆ ಎಂದು ಅವರು ಬಣ್ಣಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂದಿರದ ಮುಖ್ಯಸ್ಥ ಶಿವಾನಂದ ಜಕಾತಿ ಮಾತನಾಡಿ, ಮಂದಿರ ನಿರ್ಮಾಣದಲ್ಲಿ ತನು, ಮನ, ಧನದಿಂದ ಸಹಕರಿಸಿದ ಭಕ್ತ ಬಳಗಕ್ಕೆ ಕೃತಜ್ಞತೆ ತಿಳಿಸಿದರು. 

ಈಶ್ವರ ಗಡಿಬಿಡಿ ತಂಡದಿಂದ ಭಜನೆ ನಡೆಯಿತು. ರಾಣಿ ಚನ್ನಮ್ಮ ಮಹಿಳಾ ವೇದಿಕೆಯ ಸದಸ್ಯೆಯರು ಪ್ರಾರ್ಥಿಸಿದರು.  ಅನಿಲ ಹಂಬರ ಸ್ವಾಗತಿಸಿದರು. ರೋಹಿಣಿ ಶೆಟ್ಟರ ನಿರೂಪಿಸಿದರು. ರವಿ ಬುಲಬುಲೆ ವಂದಿಸಿದರು.

0/Post a Comment/Comments