ತವರು ನೆಲ ಕಿತ್ತೂರಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರೀಕ್ಷೆಯಂತೆ ಕಿತ್ತೂರು ಕರ್ನಾಟಕ ನಾಮಕರಣ ಬೇಡಿಕೆಗೆ ಒಪ್ಪಿಗೆ ದೊರಕಿದ್ದು, ತವರು ನೆಲ ಕಿತ್ತೂರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಉತ್ತರ ಕರ್ನಾಟಕದ ಅನೇಕ ವರ್ಷಗಳ ಬೇಡಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದಲ್ಲಿ ಕೊನೆಗೂ ಮನ್ನಣೆ ಸಿಕ್ಕಿದೆ. ಇದರ ಹಿಂದೆ ಮುಖ್ಯಮಂತ್ರಿ ಅವರ ಕಿತ್ತೂರು ಮೇಲಿನ ಪರಮ ಪ್ರೀತಿ, ಶಾಸಕ ಮಹಾಂತೇಶ ದೊಡ್ಡಗೌಡರ ಶ್ರಮ ಹಾಗೂ ಉತ್ತರ ಕರ್ನಾಟಕ ಶಾಸಕರೆಲ್ಲರ ಸಹಕಾರವಿದೆ ಎಂದು ಸ್ಮರಿಸಲಾಯಿತು.
ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಸೋಮವಾರ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ನಂತರ ಮುಂಬೈ ಕರ್ನಾಟಕದ ಭಾಗಕ್ಕೂ ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಬೇಕು ಎಂಬ ಕೂಗಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಹೆಚ್ಚು ಬಲ ಬಂದಿತು. ಈ ಬಗ್ಗೆ ಉತ್ತರ ಕರ್ನಾಟಕದ ಶಾಸಕರು ಮತ್ತು ನಾನು ಸೇರಿ ಎಲ್ಲರೂ ಸಹಿ ಮಾಡಿ ಮನವಿ ಕೂಡಾ ಸಲ್ಲಿಸಲಾಗಿತ್ತು ಎಂದು ಅವರು ನೆನಪಿಸಿದರು.
ಯಡಿಯೂರಪ್ಪ ಅವರ ನಂತರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಯಿತು. ಅದೇ ಮನವಿ ಪತ್ರದ ಮೇಲೆ ಷರಾ ಬರೆದ ಬೊಮ್ಮಾಯಿ ಅವರು ಸಂಪುಟ ಸಭೆಯಲ್ಲಿ ಈ ವಿಷಯ ಮಂಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಕಿತ್ತೂರು ಉತ್ಸವ ಉದ್ಘಾಟನೆಗೆ ಆಗಮಿಸಿದ್ದ ಬೊಮ್ಮಾಯಿ ಅವರು ಘೋಷಣೆ ಮಾಡಿ ಹೋಗಿದ್ದರು. ಇದಾದ ಮೇಲೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ. ರೂಢಿಗತವಾಗಿ ಕರೆಸಿಕೊಳ್ಳುತ್ತಿದ್ದ ಮುಂಬೈ ಕರ್ನಾಟಕ ಭಾಗವು ಇನ್ಮುಂದೆ ಕಿತ್ತೂರು ಕರ್ನಾಟಕ ಎಂದು ಕರೆಸಿಕೊಳ್ಳಲಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಬಣ್ಣಿಸಿದರು.
ಇದಕ್ಕೆ ಉತ್ತರ ಕರ್ನಾಟಕದ ಸಚಿವರು, ಶಾಸಕರು ಸಹಕಾರ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಹಾಗೂ ಕಾರಣರಾದ ಎಲ್ಲ ಸಚಿವರು ಮತ್ತು ಶಾಸಕರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, 'ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದು, ರಾಣಿ ಚನ್ನಮ್ಮನಿಗೆ ನೀಡಿದ ದೊಡ್ಡ ಗೌರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಿತ್ತೂರು ಉತ್ಸವ ಉದ್ಘಾಟನೆಗೆ ಬಂದಾಗ ಬೊಮ್ಮಾಯಿ ಅವರು ಈ ಬಗ್ಗೆ ಆಶ್ವಾಸನೆ ಕೊಟ್ಟು ಹೋಗಿದ್ದರು. ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಬೊಮ್ಮಾಯಿ ನಡೆದುಕೊಂಡಿದ್ದಾರೆ. ಈ ಘೋಷಣೆ ಹಿಂದೆ ಶಾಸಕ ಮಹಾಂತೇಶ ದೊಡ್ಡಗೌಡರ ಶ್ರಮವೂ ಹೆಚ್ಚಿಗಿದೆ ಎಂದು ಕೊಂಡಾಡಿದರು.
ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ‘ಬ್ರಿಟಿಷರ ವಿರುದ್ಧ ನಡೆದ ಮೊದಲ ಯುದ್ಧದಲ್ಲಿ ಗೆದ್ದ ಸಂದರ್ಭದಲ್ಲಿ ಆಗಿದ್ದ ಸಂತಸದಷ್ಟೇ ಇಂದಾಗುತ್ತಿದೆ. ಈ ಸಂಭ್ರಮವು ಏಳು ಜಿಲ್ಲೆಗಳ ಜನರಲ್ಲಿ ಮನೆ ಮಾಡಿದೆ. ಕಿತ್ತೂರಿನ ಹೆಸರು ಇನ್ಮುಂದೆ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ ಹಾಗೂ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ ಮಾತನಾಡಿ, ಕಿತ್ತೂರು ಕರ್ನಾಟಕ ಘೋಷಣೆ ಬಗ್ಗೆ ಸಂಭ್ರಮಪಟ್ಟರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಆರ್. ವೈ. ಪರವಣ್ಣವರ, ಉಳವಪ್ಪ ಉಳ್ಳಾಗಡ್ಡಿ, ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಚೇರಮನ್ ನಿಜಲಿಂಗಯ್ಯ ಹಿರೇಮಠ, ಚನಬಸಪ್ಪ ಮೊಕಾಶಿ, ಬಸವರಾಜ ಕೊಳದೂರ, ವಿಠ್ಠಲ ಪಾಗಾದ, ಗಂಗಣ್ಣ ಕರಿಕಟ್ಟಿ ಇದ್ದರು.
ವಿವಿಧ ಸಂಘಟನೆಗಳ ಸ್ವಾಗತ
ಕಿತ್ತೂರು ಕರ್ನಾಟಕ ನಾಮಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಿರುವುದನ್ನು ಅಖಂಡ ಕರ್ನಾಟಕ ರೈತ ಸಂಘಟನೆ ಮುಖಂಡ ಅಪ್ಪೇಶ ದಳವಾಯಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಮಹಾಂತೇಶ ಕರಬಸಣ್ಣವರ ಸ್ವಾಗತಿಸಿ, ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ.
Post a Comment