ಮೂರುಸಾವಿರ ಮಠ ಆಸ್ತಿ ಉಳಿಸಲು ಮತ್ತೆ ಜನಜಾಗೃತಿ : ದಿಂಗಾಲೇಶ್ವರ ಸ್ವಾಮೀಜಿ - Kitturಮೂರುಸಾವಿರ ಮಠ ಆಸ್ತಿ ಉಳಿಸಲು ಮತ್ತೆ ಜನಜಾಗೃತಿ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿ ಉಳಿಸುವ ಜನಜಾಗೃತಿ ಆಂದೋಲನವನ್ನು ಶೀಘ್ರ ಪ್ರಾರಂಭಿಸುವುದಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ ದಳವಾಯಿ ಪರಿವಾರದವರ ಗೃಹಪ್ರವೇಶ ಸಮಾರಂಭದಲ್ಲಿ   ಭಾನುವಾರ ಭಾಗವಹಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿದರು.

ಸಮಾಜದಲ್ಲಿ ಮಠಕ್ಕೆ ಆಸ್ತಿಯನ್ನು ದಾನವಾಗಿ ಕೊಡುವ ಕಾಲವೊಂದಿತ್ತು. ಆದರಿಂದು ಮಠದ ಆಸ್ತಿಯನ್ನೇ ನುಂಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹೊಣೆಗಾರಿಕೆ   ಇಲ್ಲದ್ದರಿಂದಾಗಿ ಮೂರುಸಾವಿರ ಮಠ ಅಧಃಪತನ ಹಾಗೂ ಈಗಿನ ಗೊಂದಲಕ್ಕೆ  ಕಾರಣವಾಗಿದೆ. ಮೂರುಸಾವಿರ ಮಠದ ಈಗಿನ ಸ್ವಾಮಿಗಳು ಕೆಲವರ ನಿಯಂತ್ರಣದಲ್ಲಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಭಕ್ತರ ಈ ಸಂದೇಹವನ್ನು ಸ್ವಾಮೀಜಿಯೇ ಪರಿಹಾರ ಮಾಡಬೇಕು ಎಂದರು.

ಸಮಾಜಮುಖಿ   ಸ್ವಾಮೀಜಿಗಳ ಕೊರತೆಯಿದ್ದು, ಮಠಮುಖಿ ಸ್ವಾಮಿಗಳ ಸಂಖ್ಯೆಯನ್ನೇ ಹೆಚ್ಚು ಕಾಣುತ್ತಿದ್ದೇವೆ. ಹೀಗಾಗಿ ಸಮಾಜದಲ್ಲಿಯ ‘ಕಸ' ಕೀಳುವವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ದರಿದ್ರತನದಿಂದ ಹೊಲದಲ್ಲಿ ಕಸ ಹೆಚ್ಚಾಗುವಂತೆ  ಕೆಲವು ದರಿದ್ರ ಸ್ವಾಮೀಜಿಗಳಿಂದ ವ್ಯವಸ್ಥೆಯಲ್ಲಿ ಕಸ ಬೆಳೆಯುವುದು ಹೆಚ್ಚಾಗಿರಬಹುದು ಎಂದು ಅವರು ಮಾರ್ಮಿಕವಾಗಿ ನುಡಿದರು.

ಮಠಗಳು ನಾಶವಾಗಬಾರದು ಎಂಬುದು ನನ್ನ ನಿಲುವು. ಮಠಗಳ ಮೂಲಕ ಸಮಾಜ ಉದ್ಧಾರವಾಗಬೇಕು ಎಂಬುವುದು ನನ್ನ ಹೋರಾಟ. ಸತ್ಯ ಮೆರೆಯುವ ಕಾಲ ಶೀಘ್ರದಲ್ಲಿಯೇ ಬರುತ್ತದೆ ಎಂದರು.

ಹಿಂದೊಮ್ಮೆ ಸತ್ಯದರ್ಶನ ಕಾರ್ಯಕ್ರಮ ಮಾಡುವಾಗ ಮೂರುಸಾವಿರ ಮಠದ ಸಮಸ್ಯೆಯನ್ನು ಕೇವಲ ಐದು ನಿಮಿಷದಲ್ಲಿ ಬಗೆಹರಿಸುವುದಾಗಿ ಹೇಳಿದ್ದೆ. ಎರಡು ವರ್ಷವಾಗುತ್ತ ಬಂದರೂ ಯಾರೂ ಇದಕ್ಕೆ ಜವಾಬ್ದಾರಿ ತೋರಿಸಲಿಲ್ಲ ಎಂದರು. 

ಸಮಾಜಕ್ಕೆ ಹಿತವಾಗುತ್ತದೆಂದರೆ ಎಲ್ಲ ತ್ಯಾಗಕ್ಕೂ ಸಿದ್ಧವಿರುವುದಾಗಿಯೂ ಅವರು ಸ್ಪಷ್ಟಪಡಿಸಿದರು.

ಹೈಕೋರ್ಟ್ ನ್ಯಾಯವಾದಿ ಪಿ. ಎಚ್. ನೀರಲಕೇರಿ, ರೈತ ಮುಖಂಡರಾದ ಮಲ್ಲಿಕಾರ್ಜುನ ವಾಲಿ, ಶಿವಾನಂದ ಹೊಳೆಹಡಗಲಿ, ಕಲ್ಲಪ್ಪ ಕುಗಟಿ, ಅಪ್ಪೇಶ ದಳವಾಯಿ, ಪರ್ವತಗೌಡ ಪಾಟೀಲ. ಫಕ್ಕೀರಪ್ಪ ದಳವಾಯಿ, ಭೀಮಣ್ಣ ಕಾಸಾಯಿ, ಮಲ್ಲಿಕಾರ್ಜುನ ಹುಂಬಿ, ಸಿದ್ದಣ್ಣ ಕಂಬಾರ, ಶಂಕ್ರೆಪ್ಪ ಯಡಳ್ಳಿ, ಚಂದ್ರಣ್ಣ ದಳವಾಯಿ, ಅಶೋಕ ದಳವಾಯಿ, ಮಹೇಶ ಕಾದ್ರೊಳ್ಳಿ, ಈರಣ್ಣ ನಂದಿಹಳ್ಳಿ, ಮಡಿವಾಳಪ್ಪ ವರಗನ್ನವರ ಉಪಸ್ಥಿತರಿದ್ದರು.

 

0/Post a Comment/Comments