ಟೋಲ್ ಪಾಸ್: ಕಿತ್ತೂರು ವರೆಗೆ ವಿಸ್ತರಣೆ ಆಗಲಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಆಗ್ರಹ - kittur


‘ತಿಂಗಳ ಪಾಸ್ ಸೌಲಭ್ಯ ವಿಸ್ತರಿಸದಿದ್ದರೆ ಹೋರಾಟ’

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಹಿರೇಬಾಗೇವಾಡಿ ಟೋಲ್‍ಗೇಟ್ ಸಂಸ್ಥೆಯವರು ಎಂ. ಕೆ. ಹುಬ್ಬಳ್ಳಿ ಪಟ್ಟಣವರೆಗೆ ನೀಡಲಾಗಿರುವ ತಿಂಗಳ ಟೋಲ್‍ಪಾಸ್ ಅನ್ನು ಕಿತ್ತೂರು ಪಟ್ಟಣದವರೆಗೆ ವಿಸ್ತರಿಸಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ರಾಜ್ಯಾಧ್ಯಕ್ಷ ಮಹಾಂತೇಶ ಕರಬಸನ್ನವರ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ   ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಶೋಕಾ ಬಿಡ್ಸ್ ಕಂಪನಿಯವರಿಗೆ ದುಬಾರಿ ಶುಲ್ಕ ದರ ಕಟ್ಟಿ ಮಧ್ಯಮ ವರ್ಗದ ವಾಹನ ಮಾಲೀಕರು ಕಂಗೆಟ್ಟು ಹೋಗಿದ್ದಾರೆ ಎಂದು ದೂರಿದರು.

ಹಿರೇಬಾಗೇವಾಡಿಯ ಸಂಬಂಧಿಕರ ಮನೆಗಳಿಗೆ ತೆರಳಲು, ಅಲ್ಲಿಯ ಜಾನುವಾರು ಮಾರುಕಟ್ಟೆಗೆ ಹೋಗಲು, ಟೋಲ್ ಗೇಟ್ ದಾಟಿ ಬೆಳಗಾವಿ ಕಚೇರಿಗಳು, ಖಾಸಗಿ ಕೆಲಸ, ಆಸ್ಪತ್ರೆಗೆ ಹೋಗಲು ಮಧ್ಯಮ ವರ್ಗದ ಸ್ವಂತ ವಾಹನ ಹೊಂದಿದ ಮಾಲೀಕರು ದುಬಾರಿ  ಶುಲ್ಕ  ತೆತ್ತು ಹೈರಾಣಾಗುತ್ತಿದ್ದಾರೆ. ಹಿರೇಬಾಗೇವಾಡಿಗೆ ಹೋಗಬೇಕೆಂದರೂ ಪಾಸ್ಟ್‍ಟ್ಯಾಗ್ ಇದ್ದರೆ ಕಾರ್‍ಗೆ 145 ರೂಪಾಯಿ, ಪಾಸ್ಟ್‍ಟ್ಯಾಗ್ ಇಲ್ಲದಿದ್ದರೆ ರೂ. 400 ಭಾರಿ ದುಬಾರಿ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಅವರು ವಿವರಣೆ ನೀಡಿದರು.

ಕಿತ್ತೂರಿಂದ ಕೇವಲ 35 ಕಿ.ಮೀ ದಿಂದ 45 ಕಿ.ಮೀ ಸಂಚಾರಕ್ಕೆ ಇಷ್ಟೊಂದು ದುಬಾರಿ ಖರ್ಚು ತೆರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ ಈ ಶುಲ್ಕ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ನಾವೇನು ಕೇಳುತ್ತಿಲ್ಲ. ತಿಂಗಳ ಪಾಸ್ ಸೌಲಭ್ಯವನ್ನು ಕಿತ್ತೂರು ವರೆಗೆ ವಿಸ್ತರಿಸಬೇಕು ಎಂದು ನಾವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ನಮ್ಮ ಮನವಿಗೆ ಸ್ಪಂದಿಸದಿದ್ದರೆ ಸಂಘಟನೆ ವತಿಯಿಂದ ಈ ದುಬಾರಿ ಶುಲ್ಕದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.