‘ಸಂವಿಧಾನದ ಅರಿವು ಸಾರ್ವಜನಿಕರಿಗೆ ಅಗತ್ಯ’ : ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ - Kittur‘ಸಂವಿಧಾನದ ಅರಿವು ಸಾರ್ವಜನಿಕರಿಗೆ ಅಗತ್ಯ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ವಿಶ್ವಮಟ್ಟದಲ್ಲಿಯೇ ಶ್ರೇಷ್ಠವಾಗಿರುವ   ಭಾರತೀಯ ಸಂವಿಧಾನವನ್ನು   ಸರ್ವರೂ ಅರಿತುಕೊಳ್ಳುವ ಅಗತ್ಯವಿದೆ ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಒತ್ತಿ ಹೇಳಿದರು.  
ಇಲ್ಲಿಯ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಧಾರವಾಡದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜೆಗೆ ಕರ್ತವ್ಯ ಮತ್ತು ಹಕ್ಕು ನೀಡುವುದರ ಜತೆಗೆ ಪ್ರತಿಯೊಬ್ಬರು ಸಮಾನರು ಎಂಬ ಆದರ್ಶವನ್ನು ಸಂವಿಧಾನ  ಸಾರುತ್ತದೆ ಎಂದರು.
ಭಾರತ ಸ್ವಾತಂತ್ರ್ಯಗೊಂಡ ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಕರಡು ಸಮಿತಿಯು ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ವಿಶ್ವದ ಶ್ರೇಷ್ಠ ಸಂವಿಧಾನವನ್ನು ಪ್ರತಿಯೊಬ್ಬರು ಒಪ್ಪುವ ರೀತಿಯಲ್ಲಿ ರಚಿಸಿತು ಎಂದು ತಿಳಿಸಿದರು.
ವಕೀಲರ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ವ್ಹಿ.ಜಿ. ಬಿಕ್ಕಣ್ಣವರ ಮಾತನಾಡಿ, ಸಂವಿಧಾನ ನಮಗೆ ಸಾಕಷ್ಟು ಹಕ್ಕುಗಳನ್ನು ನೀಡಿದ್ದು ಅವುಗಳು ಉಲ್ಲಂಘನೆಗೊಂಡಾಗ ನ್ಯಾಯಾಲಯದ   ಮೂಲಕ ನ್ಯಾಯದೊರಕಿಸಿಕೊಳ್ಳುವ ಅಧಿಕಾರವನ್ನು ಸಹ ನಮಗೆ ನೀಡಿದೆ ಎಂದರು.
ನಮ್ಮ ಹಕ್ಕುಗಳನ್ನು ಕೇಳುವುದರ ಜೊತೆಗೆ ಸಂವಿಧಾನದಲ್ಲಿ ನಾಗರಿಕರಿಗೆ ಕೆಲವೊಂದು ಕರ್ತವ್ಯಗಳನ್ನು ಸಹ ಪಾಲಿಸಲು ಸೂಚನೆ ನೀಡಲಾಗಿದೆ. ಅದರಂತೆ ನಾವೆಲ್ಲರೂ ನಮ್ಮ ಹಕ್ಕುಗಳಿಗಿಂತ ನಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ  ಪಾಲಿಸಿ ನಿರ್ವಹಿಸಿದಾಗ ಭಾರತ ಅಭಿವೃದ್ಧಿ ಶೀಲ ರಾಷ್ಟ್ರವಾಗಲು ಸಾಧ್ಯ ಎಂದು ಹೇಳಿದರು.
ಧಾರವಾಡದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್.ಟಿ ಮಾತನಾಡಿ, ನವೆಂಬರ್ 26 ಭಾರತದ ಸಂವಿಧಾನದ  ಕರಡು ಪ್ರತಿಯನ್ನು  ಅನುಮೋದಿಸಿದ ದಿನವಾಗಿದ್ದು, ಅದರ ನೆನಪಿಗಾಗಿ ಪ್ರತಿ ವರ್ಷವೂ ಈ ದಿನದಂದು ಸಂವಿಧಾನ ದಿನಾಚರಣೆ ಆಚರಿಸುವ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ  ಬಗ್ಗೆ  ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಮಾತನಾಡಿ, ಸಂವಿಧಾನ ದಿನಾಚರಣೆ ಆಚರಿಸುವುದರಿಂದ ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯವನ್ನು ನಿರ್ವಹಿಸುವ  ಜವಾಬ್ದಾರಿಗಳನ್ನು ಎಚ್ಚರಿಸುವ ದಿನವಾಗಿದೆ  ಎಂದು ಅಭಿಪ್ರಾಯಪಟ್ಟರು. ಕಿನಾವಿವ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ನಿರ್ದೇಶಕ ಡಿ. ಆರ್. ಪಾಟೀಲ ವೇದಿಕೆಯಲ್ಲಿದ್ದರು.
ಸಂವಿಧಾನ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ ಹಾಗೂ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಗದ್ದಿಕರಿವಿನಕೊಪ್ಪದ ಶಿವನಪ್ಪ ಚಂದರಗಿ ಹಾಗೂ ಸಂಗಡಿಗರ ಸಂಗೀತ ಮತ್ತು ನಾಟಕ ತಂಡವು ಡೊಳ್ಳು ವಾದ್ಯಗಳ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ನಡೆಸಿತು.
ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಾ. ಕೆ.ಆರ್. ಮೆಳವಂಕಿ ಸ್ವಾಗತಿಸಿದರು, ಸ್ವಾರಾಗಿನಿ ತಂಡ ನಾಡಗೀತೆ ಹಾಗೂ ಪ್ರಾರ್ಥನಾ ಗೀತೆ ಹಾಡಿದರು. ವಾಣಿಜ್ಯ ಪ್ರಾಧ್ಯಾಪಕಿ ಸಂಗೀತಾ ತೋಲಗಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸಿ ಎಮ್ ಗರಗದ ವಂದಿಸಿದರು.