ರಾಣಿ ಚನ್ನಮ್ಮ ವಿವಿಗೆ ಕಿತ್ತೂರು ರಾಣಿ ಚನ್ನಮ್ಮ ಮರು ನಾಮಕರಣಕ್ಕೆ ಒತ್ತಾಯ - kittur

‘ಕಿತ್ತೂರು ರಾಣಿ ಚನ್ನಮ್ಮ ವಿವಿ' ಮರು ನಾಮಕರಣಕ್ಕೆ ಒತ್ತಾಯ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಬೇಕು ಎಂದು ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಸ್ಥಳೀಯ ಕಲ್ಮಠದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಣಿ ಚನ್ನಮ್ಮ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಲ್ಲಿ ವಿಶ್ವವಿದ್ಯಾಲಯ ಅಧ್ಯಯನ ಪೀಠಗಳು ಪ್ರಾರಂಭವಾಗಬೇಕು ಎಂದು ಹೇಳಿದರು.

ಮುಂಬೈ ಕರ್ನಾಟಕದ ಏಳು ಜಿಲ್ಲೆಗಳಿಗೆ ಕಿತ್ತೂರು ಕರ್ನಾಟಕ ಎಂದು ಸರ್ಕಾರ ಮರು ನಾಮಕರಣ ಮಾಡಿದೆ. ಇವೆಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ರೂ. 5 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿವರ್ಷ ಕಿತ್ತೂರಲ್ಲಿ ರಾಣಿ ಚನ್ನಮ್ಮ ಜಯಂತಿಯನ್ನು ವಿಶೇಷ ರೀತಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸಂಸ್ಥಾನ ಕಾಲದ ಗುರು ಪರಂಪರೆ ಮಠ ಕಲ್ಮಠವಾಗಿದೆ. ರಾಣಿ ಸ್ಮರಣೆ ಮಾಡುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ಹೇಳಿದರು. 

ಕಿತ್ತೂರು ಸಂಸ್ಥಾನದ ವಂಶಸ್ಥರಿಗೆ ಸರ್ಕಾರದಿಂದ ಗೌರವ ಸಿಗಬೇಕು. ಕಿತ್ತೂರಿನ ಸ್ವಾಭಿಮಾನ ಮತ್ತು ಅಭಿವೃದ್ಧಿಗೆ ಧಕ್ಕೆ ಬಂದಾಗ ಹೋರಾಟ ಕೂಡಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 

ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಪ್ರತಿ ಆಚರಣೆಗಳಿಗೆ ನಿಯಮ ಮತ್ತು ಮೌಲ್ಯ ಇರುತ್ತದೆ. ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಗೆದ್ದ ಅ. 23 ರಂದು ಚನ್ನಮ್ಮ ಜಯಂತಿಯನ್ನಾಗಿ ಆಚರಿಸುವುದು ಸರಿಯಲ್ಲ. ನ. 14 ರಂದು ಚನ್ನಮ್ಮ ಜಯಂತಿಯನ್ನು ಆಚರಿಸಬೇಕು ಎಂದು ಹೇಳಿದರು. 

ರಾಣಿ ಚನ್ನಮ್ಮ ಎಂದರೆ ಶೌರ್ಯ, ಅಭಿಮಾನ, ಅಹಿಂಸೆಯ ಸಂಗಮದ ದೊಡ್ಡ ಮುಕುಟವಿದ್ದ ಹಾಗೆ. ಇಂಥ ರಾಣಿಯ ಸ್ಮರಣೆ ಪ್ರತಿ ಮನೆ, ಮನಗಳಲ್ಲಿ ಆಗಬೇಕಿದೆ ಎಂದರು. 

ಕಾದಂಬರಿಕಾರ ಯ. ರು. ಪಾಟೀಲ ಮಾತನಾಡಿ ನ. 14 ರಂದು ರಾಣಿ ಚನ್ನಮ್ಮನ ಜಯಂತಿಯನ್ನು ಘೋಷಣೆ ಮಾಡಬೇಕು ಎಂದು ಸರ್ಕಾರದ ಮುಂದೆ ಅರ್ಜಿ ಹಿಡಿದುಕೊಂಡ ನಿಲ್ಲಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ನೋವಿನಿಂದ ಹೇಳಿದರು.

ಕಿತ್ತೂರು ಕರ್ನಾಟಕ ಕೇವಲ ಹಾಳೆಯ ಮೇಲೆ ಘೋಷಣೆಯಾಗಬಾರದು. ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿದಂತೆ ಕಿತ್ತೂರು ಕರ್ನಾಟಕದಲ್ಲಿ ಕೈಗಾರಿಕೆ, ಉದ್ಯೋಗ, ಕೃಷಿ ಸೇರಿ ವಿವಿಧ ಕ್ಷೇತ್ರಗಳಲ್ಲಿಯ ಅಭಿವೃದ್ಧಿಗೆ ದಾಪುಗಾಲು ಇಡಬೇಕಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ  ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ವಾಯವ್ಯ ಸಾರಿಗೆ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಕಿತ್ತೂರು ಕರ್ನಾಟಕ ನಾಮಫಲಕ ಬರಬೇಕು ಎಂದು ಒತ್ತಾಯಿಸಿದರು.

ಕಿತ್ತೂರು ಕರ್ನಾಟಕ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ ಅಭಿವೃದ್ಧಿಗಾಗಿ ಜನಾಂದೋಲನ ಆದಾಗ ಪ್ರಗತಿ ಕಾಣಲು ಸಾಧ್ಯವಿದೆ. ಈ ಆಂದೋಲನದ ನೇತೃತ್ವವನ್ನು ಕಲ್ಮಠದ ಸ್ವಾಮೀಜಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಡಾ. ಶ್ರೀಕಾಂತ ದಳವಾಯಿ, ಡಾ. ಸೋಮಶೇಖರ ಹಲಸಗಿ, ಕಿತ್ತೂರು ಸಂಸ್ಥಾನದ ವಂಶಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಿತ್ತೂರು ವಂಶಸ್ಥರನ್ನು, ಕಿತ್ತೂರು ಉತ್ಸವ ನಿಮಿತ್ತ ಹೊರತರಲಾಗಿದ್ದ ಡಿಜೆ ಗೀತೆಯ ಗಾಯಕ ಪ್ರವೀಣ ಮತ್ತು ತಂಡದವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಈಶ್ವರ ಗಡಿಬಿಡಿ ಚನ್ನಮ್ಮನ ಕುರಿತು ಹಾಡಿದರು.

ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.

ಕಾವಿ ಸ್ವಾಮಿಗಳಿಗೆ ವೈರಾಗ್ಯ ಬೇಕು

ಚನ್ನಮ್ಮನ ಕಿತ್ತೂರು: ‘ಮುಖ್ಯಮಂತ್ರಿ ಕುರ್ಚಿ ಬದಿಗೆ ನಮ್ಮ ಕುರ್ಚಿ ಹಾಕಬೇಕು ಎಂದು ಕಿತ್ತೂರು ಉತ್ಸವದಲ್ಲಿ ಸ್ವಾಮೀಜಿಗಳು ಹೇಳಿ ಹಾಕಿಸಿಕೊಂಡಿದ್ದಾರೆ. ಇಂಥ ಪ್ರವೃತ್ತಿ ಸ್ವಾಮಿಗಳಿಗೆ ಸರಿಯಲ್ಲ. ಕಾವಿ ತೊಟ್ಟವರಿಗೆ ವೈರಾಗ್ಯ ಭೂಷಣವಾಗಿದೆ’ ಎಂಬ ಇಂಗಿತವನ್ನು ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ವ್ಯಕ್ತಪಡಿಸಿದರು.

ಕಲ್ಮಠದ ಸಭಾಭವನದಲ್ಲಿ ಭಾನುವಾರ ನಡೆದ ಚನ್ನಮ್ಮ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು,  ‘ಕಿತ್ತೂರು ದೊರೆಗಳ ಗುರುಗಳು ಕಲ್ಮಠದ ಸ್ವಾಮಿಗಳು, ಅವರ ಪರಂಪರೆಯ ಮುಂದುವರೆಕೆಯಾಗಿ ಈಗಿನ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಇದ್ದಾರೆ. ಸಂಸ್ಥಾನದಿಂದ ಕಲ್ಮಠವನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಗೊತ್ತಿಲ್ಲದವರು ಸುಮ್ಮನಿರುವುದು ಒಳ್ಳೆಯದು’ ಎಂದು ಹರಿಹರ ಮತ್ತು ಕೂಡಲಸಂಗಮದ ಪಂಚಮಸಾಲಿ ಸ್ವಾಮೀಜಿಗಳಿಬ್ಬರನ್ನು ಅಪ್ರತ್ಯಕ್ಷವಾಗಿ ತರಾಟೆಗೆ ತೆಗೆದುಕೊಂಡರು.

‘ಗುರುವಿದ್ದವರ ಬಳಿ ಸಿಎಂ, ಪಿಎಂ ಬರಬೇಕು. ಅವರ ಬಳಿಯೇ ಕಾವಿಧಾರಿಗಳು ಹೋಗುವುದಲ್ಲ. ಕಿತ್ತೂರು ಸಂಸ್ಥಾನ ದೊರೆಗಳು ಕಲ್ಮಠದ  ಶಿಷ್ಯರಾಗಿದ್ದರು. ಈ ಪರಂಪರೆ ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಒತ್ತಿ ಹೇಳಿದರು.

 

0/Post a Comment/Comments