‘ಕನ್ನಡ ನಾಡು, ನುಡಿ ರಕ್ಷಣೆ ಎಲ್ಲರ ಕರ್ತವ್ಯ' : ಶಾಸಕ ದೊಡ್ಡಗೌಡರ- Kittur




‘ಕನ್ನಡ ನಾಡು, ನುಡಿ ರಕ್ಷಣೆ ಎಲ್ಲರ ಕರ್ತವ್ಯ'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಹೊಯ್ಸಳ, ಬಲ್ಲಾಳ, ರಾಷ್ಟ್ರಕೂಟ, ಕದಂಬ, ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ಆಳಿದ ನಾಡಿನಲ್ಲಿ ಜನ್ಮತಾಳಿದ  ನಾವೇ ಪುಣ್ಯವಂತರು ಎಂದು ಶಾಸಕ ಮಹಾಂತೇಶ   ದೊಡ್ಡಗೌಡರ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಲ್ಲಿಯ ಚನ್ನಮ್ಮ ವರ್ತುಲದಲ್ಲಿ  ತಾಲ್ಲೂಕು ಆಡಳಿತ ವತಿಯಿಂದ ಸೋಮವಾರ  ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ   ಅವರು ಮಾತನಾಡಿದರು.

ಈ ನೆಲದ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ. ಕನ್ನಡ ಶಾಲೆಗಳನ್ನು ಅಚ್ಚುಕಟ್ಟಾಗಿ ಇಡಬೇಕು. ಬೇರೆ ಭಾಷೆ ಗೌರವಿಸುವುದರ ಜೊತೆಗೆ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ನಾಡು, ನುಡಿ, ನೆಲ, ಜಲ ಸಂರಕ್ಷಣೆ ಮಾಡುವ ಹೊಣೆ ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಒಂದೆಡೆ ಮನೆ ಮಾಡಿದ್ದರೆ, ಕಳೆದೆರಡು ದಿನಗಳ ಹಿಂದೆ ಕನ್ನಡ ನಾಡಿನ ಪ್ರತಿಭಾವಂತ  ನಟ ಪುನೀತ್ ರಾಜಕುಮಾರ್ ಅವರ ಚಿಕ್ಕ ವಯಸ್ಸಿನ ಅಗಲಿಕೆ ನೋವು ಮತ್ತೊಂದೆಡೆ ಮಡುಗಟ್ಟಿದೆ ಎಂದು ವಿಷಾದಿಸಿದರು.

ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಮತ್ತು  ಕನ್ನಡ ಗೀತೆಗಳನ್ನು ಹಾಡಿದರು. ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಮುಖ್ಯಾಧಿಕಾರಿ ಪ್ರಕಾಶ ಮಠದ,  ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಇಂಜನಿಯರ್ ಪ್ರವೀಣ ಹುಲಜಿ, ರೈತ ಸಂಪರ್ಕ ಕೇಂದ್ರ ಅಧಿಕಾರಿ ಮಂಜುನಾಥ ಕೆಂಚರಾಹುತ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‍ಐ ದೇವರಾಜ ಉಳ್ಳಾಗಡ್ಡಿ, ಕಂದಾಯ ನಿರೀಕ್ಷಕ ವೀರಣ್ಣ ಬಡಗಾವಿ, ತೋಟಗಾರಿಕೆ ಇಲಾಖೆ ಅಧಿಕಾರಿ ಎಂ. ಆರ್. ಕಲ್ಮಠ, ನಿವೃತ್ತ ಪ್ರಾಚಾರ್ಯ ಡಾ. ಎಸ್. ಬಿ. ದಳವಾಯಿ, ಡಾ. ಸೋಮಶೇಖರ ಹಲಸಗಿ, ಡಿ. ಆರ್. ಪಾಟೀಲ, ಕಿರಣ ಪಾಟೀಲ,  ವಿವಿಧ ಇಲಾಖೆ ನೌಕರರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹೇಶ ಹೆಗಡೆ ನಿರೂಪಿಸಿದರು

0/Post a Comment/Comments