ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಜಿಲ್ಲೆಯ ಸ್ವಾಮೀಜಿಗಳು, ಕೆಎಲ್‍ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸಾಹಿತಿಗಳು ಹಾಗೂ ಕನ್ನಡಿಗರ ಸರ್ವಸಮ್ಮತ ಅಭ್ಯರ್ಥಿಯಾಗಿರುವ ಮಂಗಲಾ ಮೆಟಗುಡ್ಡ ಅವರನ್ನು ಬಹುಮತದಿಂದ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಕಸಾಪ ಹಿರಿಯ ಸದಸ್ಯ ಚಿನ್ನಪ್ಪ ಮುತ್ನಾಳ ಮನವಿ ಮಾಡಿದರು.
ಕಿತ್ತೂರಲ್ಲಿ ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರವಧಿಯಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಅವರಿಗೆ ಅವಕಾಶ ನೀಡಬೇಕಾಗಿದೆ ಎಂದು ಸಮರ್ಥಿಸಿಕೊಂಡÀರು.
ಪರಿಷತ್ತಿನ ಕಾರ್ಯಗಳನ್ನು ಮನೆ, ಮನಗಳಿಗೆ ತಲುಪಿಸುವ ಕಾರ್ಯಗಳನ್ನು ಮಾಡಿದ್ದಾರೆ. ಐದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ 44 ಸಾಹಿತ್ಯ ಸಮ್ಮೇಳನ ಹಾಗೂ 4 ಜಿಲ್ಲಾ ಸಮ್ಮೇಳನ ಯಶಸ್ವಿಯಾಗಿ ಮಾಡಿದ್ದಾರೆ. ಮಹಿಳಾ ಅಧ್ಯಕ್ಷರಾಗಿ ಅವರು ಮಾಡಿರುವ ಅನೇಕ ಕನ್ನಡದ ಕೆಲಸಗಳು ಎಲ್ಲರಲ್ಲಿಯೂ ಅಭಿಮಾನ ಮೂಡಿಸುವಂತಾಗಿವೆ ಎಂದು ಬಣ್ಣಿಸಿದರು.
ಕಿತ್ತೂರು ತಹಶೀಲ್ದಾರ್ ಕಚೇರಿಯಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಮುಂಜಾನೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಈ ಅವಧಿಯೊಳಗೆ ಮತಕೇಂದ್ರಕ್ಕೆ ಆಗಮಿಸಿ ಎಲ್ಲರೂ ಹಕ್ಕು ಚಲಾಯಿಸಬೇಕು ಎಂದು ಕೋರಿದರು.
ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಸೋಮಶೇಖರ ಹಲಸಗಿ ಮಾತನಾಡಿ, ಮತದಾನಕ್ಕೆ ಬರುವ ಸಂದರ್ಭದಲ್ಲಿ ಆಧಾರ ಅಥವಾ ಇನ್ನಾವುದಾದರೂ ಗುರುತಿನ ಚೀಟಿ ತರಬೇಕು. ಮರು ಆಯ್ಕೆ ಬಯಸಿರುವ ಮೆಟಗುಡ್ಡ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಕಿರಣ ಪಾಟೀಲ, ಬಸವರಾಜ ಮಾತನವರ, ಮಂಜುನಾಥ ತೊಟ್ಟಿಲಮನಿ ಇದ್ದರು.
Post a Comment