ಬಹುಮಾನದ ದುಡ್ಡು ಕೊಡದಷ್ಟು ಬಡವಾಯಿತೇ ಉತ್ಸವ ಸಮಿತಿ? - kittur


 ಬಹುಮಾನದ ದುಡ್ಡು ಕೊಡದಷ್ಟು ಬಡವಾಯಿತೇ ಉತ್ಸವ ಸಮಿತಿ?

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು:
‘ಮೊದಲು ರೂ. 30 ಲಕ್ಷಕ್ಕೆ ಸೀಮಿತವಾಗಿದ್ದ ಕಿತ್ತೂರು ಉತ್ಸವ ಅನುದಾನ ಮಹಾಂತೇಶ ದೊಡ್ಡಗೌಡರ ಅವರು ಶಾಸಕರಾದ ನಂತರ ರೂ. 70 ಲಕ್ಷ ಹಾಗೂ ರೂ. 1 ಕೋಟಿಗೆ ಏರಿಕೆಯಾಗಿದೆ. ಆದರೂ ಕೊಡಬೇಕಾದವರ ದುಡ್ಡನ್ನು ಉತ್ಸವ ಸಮಿತಿ ನೀಡುತ್ತಿಲ್ಲ. ಹಾಗಾದರೆ ಬಂದ ದುಡ್ಡು ಎಲ್ಲಿ ಹೋಗುತ್ತಿದೆ' ಎಂದು ಸಾರ್ವಜನಿಕರು ಸಂದೇಹ ಪಡುವಂತಾಗಿದೆ.
‘ಪೆಂಡಾಲ್‍ಗೆ ರೂ. 8 ರಿಂದ 10 ಲಕ್ಷ, ಫೋಟೊ, ವಿಡಿಯೋ ಚಿತ್ರೀಕರಣಕ್ಕೆ ಸುಮಾರು 2 ಲಕ್ಷ, ಮಾಲೆ, ಸ್ಮರಣಿಕೆ ಸೇರಿ ಲಕ್ಷಾಂತರ ದುಡ್ಡು ವ್ಯಯ ಮಾಡುತ್ತಿದ್ದ ಉತ್ಸವ ಸಮಿತಿಗೆ ಶಾಸಕ ದೊಡ್ಡಗೌಡರ ಅವರು ಅದನ್ನೂ ಉಳಿತಾಯ ಮಾಡಿಕೊಡುತ್ತಿದ್ದಾರೆ. 
ಸ್ಥಳದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುವುದರಿಂದ ಮೊದಲು ಬಾರಿಗೆ 6 ಲಕ್ಷಕ್ಕೆ ಆಗಿದ್ದ  ಪೆಂಡಾಲ್ ದವರ ವೆಚ್ಚ, ಅದರ ಮರುವರ್ಷವೇ ರೂ. 99 ಸಾವಿರಕ್ಕೆ ಟೆಂಡರ್ ಆಯ್ತು. ಇಲ್ಲಿಯೇ ಲಕ್ಷಾಂತರ ದುಡ್ಡು ಸಮಿತಿಗೆ ಉಳಿಯಿತು. ಆದರೂ ವರ್ಷವಿಡಿ ಸ್ಮರಣಿಕೆ ಮಾಡಿದವರು, ಮಾಲೆ ಕೊಟ್ಟವರು, ಕಸ ಕಿತ್ತು ವೃತ್ತ, ಫುಟ್‍ಪಾತ್‍ಗೆ  ಬಣ್ಣ ಬಳಿದವರು ವರ್ಷವಿಡಿ ತಿರುಗಾಡುವುದು ತಪ್ಪಿಲ್ಲ ಎಂದು ಕೆಲಸ ಮಾಡಿದ ಗುತ್ತಿಗೆದಾರರ ದೂರು ಮೊನ್ನೆ ನಡೆದ ಕಿತ್ತೂರು ಉತ್ಸವ ಪೂರ್ವಭಾವಿ  ಸಭೆಯಲ್ಲಿ    ಮಾರ್ದನಿಸಿತು. 
‘ಹಾಗಾದರೆ ಬಂದ ದುಡ್ಡು ಎಲ್ಲಿ ಹೋಗುತ್ತಿದೆ' ಎಂದೂ ಪ್ರಶ್ನೆ ಮಾಡಿದರು. ಆದರೆ ಈ ಪ್ರಶ್ನೆಗೆ ಉತ್ಸವ ಸಮಿತಿಯಿಂದಾಗಲಿ ಅಥವಾ ಖರ್ಚುವೆಚ್ಚ ನೋಡಿಕೊಳ್ಳುವ  ಉಪವಿಭಾಗಾಧಿಕಾರಿ ಕಚೇರಿಯವರಾಗಲಿ ಉತ್ತರಿಸುವ ಗೋಜಿಗೆ ಹೋಗದಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಜನರು ಮಾತಾಡಿಕೊಳ್ಳುವಂತಾಗಿದೆ. 
ಬಹುಮಾನದ ದುಡ್ಡು ಇನ್ನೂ ನೀಡಿಲ್ಲ!
‘ಪದವಿ  ಪೂರ್ವ  ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ 2018 ರಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಕುರಿತು ಕಿತ್ತೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆ ಏನೊ ನಡೆಯಿತು. ವಿಜೇತರ ಹೆಸರುಗಳನ್ನೂ ಘೋಷಿಸಲಾಯಿತು. ಅವರಿಗೆ ನೀಡಬೇಕಾದ ಪ್ರಥಮ ಬಹುಮಾನದ  ರೂ. 3 ಸಾವಿರ, ದ್ವಿತೀಯ ರೂ. 2 ಸಾವಿರ ಹಾಗೂ ತೃತೀಯ ರೂ. 1 ಸಾವಿರ ಬಹುಮಾನ ಮೊತ್ತವನ್ನು ಇನ್ನೂ ಕೊಟ್ಟಿಲ್ಲ' ಎಂಬುದು ವಿದ್ಯಾರ್ಥಿನಿಯರ ದೂರಾಗಿದೆ.
‘ಈಗ ಪಿಯು ಮುಗಿಸಿ ಡಿಗ್ರಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇವೆ. ಒಂದ ವರ್ಷವಾದರೂ ಬಿಟ್ಟು ಕೊಟ್ಟಾರು ಎಂದು ತಿಳಿದುಕೊಂಡಿದ್ದೆವು. ಇನ್ನೂ ವರೆಗೂ ಕೊಟ್ಟಿಲ್ಲ. ಈ ದುಡ್ಡು ಪಡೆಯಲು ಏನು ಮಾಡಬೇಕು' ಎಂದು ಅಮಾಯಕರಾಗಿ ವಿದ್ಯಾರ್ಥಿನಿಯರು ಪ್ರಶ್ನಿಸುತ್ತಾರೆ. ಇದು ಉತ್ಸವ ಸಮಿತಿಗೆ ಅರಿವಾಗಬೇಕು ಎನ್ನುತ್ತಾರೆ ಪಾಲಕರು.

ಶಾಸಕ ದೊಡ್ಡಗೌಡರು ದುಡ್ಡು ಕೊಡಿಸಲಿ
 ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು:
‘ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರ ದುಡ್ಡುನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಉಪವಿಭಾಗಾಧಿಕಾರಿ ಕಚೇರಿಯಿಂದ ಕೊಡಿಸಬೇಕು' ಎಂದು ಪಾಲಕರು ಮನವಿ ಮಾಡಿಕೊಂಡಿದ್ದಾರೆ.
‘ಅದೇನು ಲಕ್ಷಾಂತರ ದುಡ್ಡಲ್ಲ. ಮೂರು ಬಹುಮಾನಗಳ ಮೊತ್ತ ಸೇರಿಸಿದರೆ 6 ಸಾವಿರ ಆಗುತ್ತದೆ. ಗೆದ್ದಾಗ ಸಂಭ್ರಮಪಟ್ಟಿದ್ದ ವಿದ್ಯಾರ್ಥಿನಿಯರಿಗೆ ಬಹುಮಾನ ದುಡ್ಡು ಬರದೇ ಇರುವುದು ಅವರಲ್ಲಿ ಬೇಸರ ಮೂಡಿಸಿದೆ. ಶಾಸಕರು ಅವರಿಗೆ ಸೂಚನೆ ನೀಡಿ ಬಾಕಿ ದುಡ್ಡು ಕೊಡಿಸಬೇಕು’ ಎಂದು ವಿನಂತಿಸಿದರು.

0/Post a Comment/Comments