ಸಂಶೋಧಕ ಆರ್. ಎಂ. ಷಡಕ್ಷರಯ್ಯ ನೇತೃತ್ವ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ರಜತ ಮಹೋತ್ಸವ ಸಡಗರದಲ್ಲಿರುವ ರಾಣಿ ಚನ್ನಮ್ಮನ ಶೌರ್ಯ, ತ್ಯಾಗ ಮತ್ತು ಬಲಿದಾನ ಸ್ಮರಣೆಯ ಇತಿಹಾಸ ಪ್ರಸಿದ್ಧ 'ಕಿತ್ತೂರು ಚನ್ನಮ್ಮನ ಉತ್ಸವ'ದಲ್ಲಿ ಈ ಬಾರಿ ಐತಿಹಾಸಿಕ ವಿಚಾರಗೋಷ್ಟಿ ನಡೆಯಲಿದೆ.
ಅ. 24 ರಂದು ನಡೆಯಲಿರುವ ವಿಚಾರಗೋಷ್ಟಿಯಲ್ಲಿ 7 ಗೋಷ್ಟಿಗಳನ್ನು ಆಯೋಜಿಸಲಾಗಿದೆ. 32ಕ್ಕೂ ಹೆಚ್ಚು ವಿದ್ವಾಂಸರು ಪ್ರಬಂಧ ಮಂಡನೆ ಮಾಡಲಿದ್ದಾರೆ. ಈ 'ಮ್ಯಾರಥಾನ್ ವಿಚಾರಗೋಷ್ಟಿ'ಯ ನೇತೃತ್ವವನ್ನು ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ಆರ್. ಎಂ. ಷಡಕ್ಷರಯ್ಯ ವಹಿಸಿದ್ದಾರೆ.
ಎಲ್ಲ 32 ವಿದ್ವಾಂಸರಿಗೆ ಅವರೇ ವಿಷಯಗಳನ್ನು ನೀಡಿದ್ದಾರೆ. ಇನ್ನೂ ಯಾರಾದರೂ ಪ್ರಬಂಧ ಮಂಡಿಸುವವರು ಉಳಿದಿದ್ದರೆ ಅವರಿಗೂ ವಿಷಯ ಕೊಡುವುದಾಗಿ, ಕಿತ್ತೂರು ಕೋಟೆ ಆವರಣದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಈಚೆಗೆ ನಡೆದ ವಿಚಾರಗೋಷ್ಟಿ ಉಪಸಮಿತಿ ಸಿದ್ಧತಾ ಸಭೆಯಲ್ಲಿ ಅವರು ಪ್ರಕಟಿಸಿದ್ದಾರೆ.
‘ಒಬ್ಬರು ಮಂಡಿಸಿದ ವಿಷಯ ಮತ್ತೆ ಮಂಡಿಸಲು ಹೋಗಬಾರದು. ಪ್ರತಿಯೊಬ್ಬರಿಗೆ ಐದು ನಿಮಿಷ ಪ್ರಬಂಧ ಮಂಡನೆಗೆ ಕಾಲಾವಕಾಶ ನೀಡಲಾಗಿದೆ. ಪ್ರಬಂಧಕಾರರಿಗೆ ಹಾರ್ಡ್ ಮತ್ತು ಸಾಫ್ಟ್ ಕಾಪಿ ಪೂರೈಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಮಂಡನೆಯಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು' ಎಂದು ಮಾಹಿತಿ ನೀಡಿದರು.
‘ಕಿತ್ತೂರಿಗೆ ಸಂಬಂಧಪಟ್ಟಂತೆ ಅನೇಕ ಮಾಹಿತಿಗಳು ಅಂತೆ,ಕಂತೆಗಳ ರೂಪದಲ್ಲಿವೆ. ಅವುಗಳನ್ನು ಚಾರಿತ್ರ್ಯದ ಚೌಕಟ್ಟಿನಲ್ಲಿ ಕೂಡ್ರಿಸಿ ಸ್ಪಷ್ಟೀಕರಣ ನೀಡಬೇಕಿದೆ. ಹೊಸ ವಿಷಯ ಸಿಕ್ಕರೆ ದಾಖಲಿಸಬಹುದು. ಅಂತೆ, ಕಂತೆ ಇದ್ದರೆ
ತೆಗೆದು ಹಾಕಲು ಬರುತ್ತದೆ' ಎಂದು ಸಮರ್ಥಿಸಿಕೊಂಡರು.
ಉಪಸಮಿತಿ ಉಪಾಧ್ಯಕ್ಷ ಯ. ರು. ಪಾಟೀಲ ಮಾತನಾಡಿ ಸಲಹೆ, ಸೂಚನೆಗಳನ್ನು ನೀಡಿದರು. ಪ್ರೊ. ಚಂದ್ರಶೇಖರ ಗಣಾಚಾರಿ, ಲೋಕೋಪಯೋಗಿ ಇಲಾಖೆಯ ಪವನಕುಮಾರ್, ಕ್ಯುರೇಟರ್ ರಾಘವೇಂದ್ರ, ಬಸವರಾಜ ಕಮತ, ಮಹೇಶ ಚನ್ನಂಗಿ, ಬಸವರಾಜ ಪುಟ್ಟಿ, ಬಸವರಾಜ ಸರದಾರ, ಪ್ರವೀಣ ಸರದಾರ, ಇದ್ದರು.
Post a Comment