ಭೇಟಿಯಾಗಿದ್ದರೆ ಏನು ಹೇಳುತ್ತಿದ್ದರೊ ಗೊತ್ತಿಲ್ಲ!
ಪ್ರೆಸ್‍ಕ್ಲಬ್ ವಾರ್ತೆಚನ್ನಮ್ಮನ ಕಿತ್ತೂರು: ಕಾರ್ಯಕ್ರಮ ಮುಗದ್ ಮ್ಯಾಲ್ ಸ್ವಲ್ಪ ಭೆಟ್ಯಾಗ್..
ಹೀಗೆಂದು ಹೇಳಿದ್ದವರು ಕಲ್ಯಾಣರಾವ್ ಮುಚಳಂಬಿ ಸರ್. ಅದು ಕಿತ್ತೂರಿನ ಕೋಟೆ ಆವರಣದ
ಮುಂಭಾಗ. ಬೆಳಗಾವಿಗೆ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಬರುವವರಿದ್ದರು. ಅದರ ಪೂರ್ವಭಾವಿಯಾಗಿ ದಿವಂಗತ ಬಾಬಾಗೌಡ ಪಾಟೀಲ ಅವರು ರೈತರ ಸಭೆಯೊಂದನ್ನು ಆಯೋಜಿಸಿದ್ದರು.
ಅಂದಿನ ಐತಿಹಾಸಿಕ ಸಭೆಗೆ ಚುಕ್ಕಿ ನಂಜುಂಡಸ್ವಾಮಿ, ಹೈಕೋರ್ಟ್ ನ್ಯಾಯವಾದಿ ಪಿ. ಎಚ್. ನೀರಲಕೇರಿ, ಸಿದಗೌಡ ಮೋದಗಿ ಸೇರಿ ಪ್ರಮುಖ ರೈತ ಮುಖಂಡರು ಹಾಜರಿದ್ದರು.
ರಾಷ್ಟ್ರೀಯ ಹೆದ್ದಾರಿ ಬಳಿಯ ಅಶ್ವಾರೂಢ ರಾಣಿ ಚನ್ನಮ್ಮ ಪ್ರತಿಮೆಯಿಂದ ಹೊರಟ ಮೆರವಣಿಗೆ ಕೋಟೆ ಆವರಣಕ್ಕೆ ಬಂದು ಸಭೆಯಾಗಿ ಮಾರ್ಪಟ್ಟಿತ್ತು. ಸಭೆ ಸ್ವಲ್ಪ ಸಮಯ ಮೊದಲೇ ವೇದಿಕೆ ಏರಲು ಹೊರಟಿದ್ದ ಅವರಿಗೆ ಭೇಟಿಯಾಗಿದ್ದೆವು. ಆ ಸಂದರ್ಭದಲ್ಲಿ ಈ ಮಾತನ್ನು ಅವರು ಆಡಿದ್ದರು.
ಯಾವುದೇ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದವರು ಕಲ್ಯಾಣರಾವ್ ಮುಚಳಂಬಿ ಅವರು. ಅದು ಸಾಹಿತ್ಯ, ಸಂಸ್ಕøತಿ, ಧಾರ್ಮಿಕ ಅಥವಾ ರೈತ ಹೋರಾಟವಿರಲಿ ಅದರಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದವರು ಮುಚಳಂಬಿ ಅವರು.
ಕನ್ನಡನಾಡು ಪಕ್ಷ ಹುಬ್ಬಳ್ಳಿಯಲ್ಲಿ ಉದಯವಾದಾಗ ಅದರ ಸಂಘಟನೆ, ಸಾರ್ವತ್ರಿಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಅವರು ಭಾಗವಹಿಸಿದ್ದರು. ಹೋರಾಟ ಎಂದಾಗ ಎಲ್ಲರಿಗೂ ನೆನಪಾಗುತ್ತಿದ್ದವರು ಕಲ್ಯಾಣರಾವ್ ಮುಚಳಂಬಿ ಅವರು. ಕೆಲವೊಮ್ಮೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಹೋರಾಟ ರೂಪಿಸುತ್ತಿದ್ದರು. 'ಹಂಗಲ್ ಅದ..' ಎಂದು ಕೆಲವೊಮ್ಮೆ ಪ್ರೀತಿಯಿಂದ ಮಾತನಾಡಿದ್ದಿದೆ.
72 ವಯಸ್ಸಾಗಿದ್ದರೂ ಯುವಕರ ನಾಚಿಸುವಂತೆ ಚಟವಟಿಕೆಯಿಂದ ಅವರಿದ್ದರು. ವೃತ ಕೈಗೊಂಡು ಪಾದಯಾತ್ರೆ ಹೊರಟಾಗ ಅ. 6 ರಂದು ಸಾವು ಅವರನ್ನು ಅಪ್ಪಿಕೊಂಡಿದ್ದು ತೀರಾ ದುರಂತ.
ಅಂದು ಸಭೆ ಮುಗಿದ ಮೇಲೆ ಅವರಿಗೆ ಭೇಟಿಯಾಗಲು ಅವಕಾಶ ಸಿಗಲಿಲ್ಲ. ಗಡಿಬಿಡಿಯಲ್ಲಿ ಹೊರಟು ಹೋಗಿದ್ದರು. ಭೇಟಿಯಾಗಿದ್ದರೆ ಏನು ಹೇಳುತ್ತಿದ್ದರೋ.. ಗೊತ್ತಿಲ್ಲ. ಕೇಳೋಣವೆಂದರೆ ಭೇಟಿಯಾಗದ ಲೋಕಕ್ಕೆ ಹೊರಟು ಹೋಗಿದ್ದಾರೆ!
Post a Comment