ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಗಾಂಧೀಜಿಗೆ ನಮನ - kittur



ದೊಡವಾಡ:  ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ - click...
‘ಮನ ಪರಿವರ್ತನೆ ಮದ್ಯಮುಕ್ತ ಜೀವನಕ್ಕೆ ಮಾರ್ಗ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕುಡಿತದ ಪರಿಣಾಮದಿಂದ ಕುಟುಂಬದ ಸದಸ್ಯರೆಲ್ಲ ಕುಗ್ಗಿ ಹೋಗುತ್ತಾರೆ. ಸಮಾಜದಲ್ಲಿ ಅವರಿಗೆ ಗೌರವವೂ ಸಿಗುವುದಿಲ್ಲ. ಮದ್ಯವ್ಯಸನಿಗಳು  ಇದನ್ನು  ಗಮನದಲ್ಲಿರಿಸಿ ಮನಪರಿವರ್ತನೆ ಮಾಡಿಕೊಂಡು ವ್ಯಸನದಿಂದ ದೂರ ಇರಬೇಕು ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಸಲಹೆ ನೀಡಿದರು.
ಇಲ್ಲಿಯ ಕಲ್ಮಠದ ಸಭಾಭವನದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಗಾಂಧಿ ನಮನ ಹಾಗೂ ನವಜೀವನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಳ ಮತ್ತು ಆದರ್ಶ ಜೀವನ ಬದುಕಿದವರು ಮಹಾತ್ಮ ಗಾಂಧೀಜಿ. ಅವರಂತೆ ಕೇವಲ ಪಂಚೆ ಉಟ್ಟು ಜೀವನ ನಡೆಸುವುದು ಅಸಾಧ್ಯದ ಮಾತಾಗಿದೆ.  ಆದರೆ ಅವರ ತತ್ವಗಳನ್ನು ಪರಿಪಾಲನೆ ಮಾಡುವುದು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.
ಜನಜಾಗೃತಿ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ ಮಾತನಾಡಿ, ಗಾಂಧೀಜಿ ಅವರು ಕೇವಲ ರಾಜಕೀಯ ಸ್ವಾತಂತ್ರ್ಯದ ಕನಸು ಕಂಡಿರಲಿಲ್ಲ. ಸ್ವರಾಜ್ಯದ ಜೊತೆಗೆ ಸುರಾಜ್ಯ ನಿರ್ಮಾಣದ ಗುರಿ ಅವರದಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ    ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತಿದೆ. ಇದರಲ್ಲಿ  ಮದ್ಯಮುಕ್ತ ಸಮಾಜ ನಿರ್ಮಾಣದ ಕಾರ್ಯ ಅತ್ಯಂತ ಶ್ರೇಷ್ಠವಾಗಿದೆ ಎಂದು ಶ್ಲಾಘಿಸಿದರು.
ಗ್ರಾಮೀಣ ಭಾಗದಲ್ಲಿ ಮದ್ಯವ್ಯಸನಿ ಅನೇಕ ಕುಟುಂಬಗಳು ಹಾಳಾಗಿ ಹೋಗಿದ್ದಾವೆ. ಟೆನ್ಶನ್ (ಒತ್ತಡ)ದಲ್ಲಿ ಕುಡಿಯುತ್ತೇವೆಂದು ಹೇಳುವ ನೀವು ಇಡೀ ಸಮಾಜಕ್ಕೆ ಟೆನ್ಶನ್ ಕೊಡುತ್ತೀರಿ. ಹೀಗೆ ಮಾಡುವುದು ಬೇಡ ಎಂದು ಅವರ ಕೋರಿದರು.
ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಜಿ. ಮಾತನಾಡಿದರು.
ಮಂಜುಳಾ ಬಸವರಾಜ, ಶಂಕರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಜನಜಾಗೃತಿ ಸದಸ್ಯರಾದ ಕೃಷ್ಣಾ ಕುಲಕರ್ಣಿ, ಅದೃಶ್ಯಪ್ಪ ಗದ್ದಿಹಳ್ಳಿ, ಉಮಾದೇವಿ ಬಿಕ್ಕಣ್ಣವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಶಾಂತ ನಾಯ್ಕ ಸ್ವಾಗತಿಸಿದರು. ಗಣೇಶ ನಿರೂಪಿಸಿದರು. ಪ್ರತಾಪ್ ವಂದಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಾಯ ಬಾರದೂ, ಇರಲೂ ಬಾರದು: ಹೀಗಿತ್ತು ಜೀವನ!
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಗಂಡ ಕುಡಿಯುವ ಚಟ ಅಂಟಿಸಿಕೊಂಡಾಗ ಮಧ್ಯರಾತ್ರಿ ನನ್ನನ್ನು ಹಾಗೂ ಇಬ್ಬರು ಮಕ್ಕಳನ್ನು ಹೊರಗೆ ಹಾಕುತ್ತಿದ್ದ. ಸಾಮಾಜಿಕವಾಗಿ ಗೌರವ ಹಾಳಾಗಿತ್ತು. ಸಾಯಲೂ ಬಾರದು, ಇತ್ತ ಇರಲೂ ಬಾರದು ಎನ್ನುವ ಹಾಗಿತ್ತು ಪರಿಸ್ಥಿತಿ..
ಧರ್ಮಸ್ಥಳ ಸಂಸ್ಥೆ ಭಾನುವಾರ ಕಲ್ಮಠ ಸಭಾಭವನದಲ್ಲಿ ಏರ್ಪಡಿಸಿದ್ದ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಈ ವೇದನೆಯನ್ನು ತೋಡಿಕೊಂಡು ನಿಟ್ಟುಸಿರು ಬಿಟ್ಟವರು, ಮಂಜುಳಾ ಹುಣಸೀಕಟ್ಟಿ.
ಸದಾ ವ್ಯಸನಿಯಾದ ಗಂಡನಿಗೆ ಕುಟುಂಬದ ಬಗ್ಗೆ ಕಿಂಚಿತ್ತೂ ಚಿಂತೆಯೇ ಇರಲಿಲ್ಲ. ಬಹಳ ನೊಂದು ಹೋಗಿದ್ದೆವು. ಧರ್ಮಸ್ಥಳ ಮಂಜುನಾಥ ಕೃಪೆಯಿಂದಾಗಿ ಬದುಕಿ ಬಂದಿದ್ದೇವೆ. ಗಂಡ ಕುಡಿತ ಬಿಟ್ಟಿದ್ದಾನೆ. ನೆಮ್ಮದಿಯಿಂದ ಈಗ ಇದ್ದೇವೆ ಎಂದರು.
ಹೊಳಿನಾಗಲಾಪುರ ಗ್ರಾಮದ ಶಂಕರ ಮಾತನಾಡಿ ಶಿಬಿರದಲ್ಲಿ ಪಾಲ್ಗೊಂಡು ಮನ ಪರಿವರ್ತನೆ ಆಗಿದ್ದರಿಂದ ಕುಡಿತ ಬಿಟ್ಟು ಮೂರು ವರ್ಷಗಳಾಗಿವೆ. ಕೃಷಿ, ಹೈನುಗಾರಿಕೆ ಮಾಡಿಕೊಂಡಿದ್ದೇನೆ. ಕುಟುಂಬವೂ ನೆಮ್ಮದಿಯಿಂದಿದೆ ಎಂದು ಅನುಭವ ಹಂಚಿಕೊಂಡರು.

0/Post a Comment/Comments