ಸಂಸ್ಕಾರವಂತ ನಟ ಪುನೀತ್ ರಾಜಕುಮಾರ್
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಅದು ವಿಮಾನ ನಿಲ್ದಾಣದ ಆವರಣ. ಅಲ್ಲಿದ್ದವರು ವಿವಿಧ ಭಾಷೆಗಳಲ್ಲಿ ನಟಿಸಿರುವ ಪ್ರಖ್ಯಾತ ನಟಿ. ಅವರನ್ನು ನೋಡಿದವರೇ ‘ಅಮ್ಮಾ ಚೆನ್ನಾಗಿದ್ದೀರಾ' ಎಂಬ ಮಾತಿನೊಂದಿಗೆ ಕಾಲು ಮುಟ್ಟಿ ನಮಸ್ಕರಿಸುತ್ತಾರೆ...
ಹೀಗೆ ಬಾಗಿ ನಮಸ್ಕರಿಸಿದವರು ಬೇರಾರೂ ಅಲ್ಲ, ಕನ್ನಡ ಪ್ರಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಲ್ಲಿ ನಮಿಸಿದ್ದು ಖ್ಯಾತ ನಟಿ ಲಕ್ಷ್ಮಿ ಅವರಿಗೆ.
‘ಅನೇಕ ಸೂಪರ್ ಸ್ಟಾರ್ ಮಕ್ಕಳು ನನಗೆ ಭೇಟಿಯಾಗುತ್ತಾರೆ. ಆದರೆ ಹೀಗೆ ಕಾಲುಮಟ್ಟಿ ನಮಸ್ಕರಿಸುವವರು ರಾಜಕುಮಾರ್ ಪುತ್ರರು ಮಾತ್ರ' ಎಂದೂ ನಟಿ ಲಕ್ಷ್ಮಿ ರಿಯಾಲಿಟಿ ಷೋ ಒಂದರಲ್ಲಿ ಹೇಳಿಕೊಂಡಿದ್ದಿದೆ.
ನಟನೆಯ ಜೊತೆ ಮಕ್ಕಳಿಗೆ ಸಂಸ್ಕಾರವನ್ನೂ ಕಲಿಸಿದ್ದು ರಾಜ್‍ಕುಮಾರ್ ಕುಟುಂಬ. ಇಂಥ ಸಂಸ್ಕಾರವಂತ ಕುಟುಂಬದ ಕುಡಿ ಪುನೀತ್ ರಾಜಕುಮಾರ್ ಶುಕ್ರವಾರ ಹಠಾತ್ ನಿಧನ ಹೊಂದಿದ್ದಾರೆ. ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು ದುರಂತ. ವಯಸ್ಸು ಕೇವಲ 46. ಕನ್ನಡ ಚಿತ್ರರಂಗದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೇ ವಿಧಿ ಅವರನ್ನು ತಿರುಗಿ ಬಾರದ ದಾರಿಗೆ ಕರೆದುಕೊಂಡು ಹೋಗಿದೆ.
ಅವರ ನಟನೆ, ಫೈಟ್ ಅದ್ಭುತವಾಗಿತ್ತು. ಡಾನ್ಸ್ ಇನ್ನೂ ಅದ್ಭುತವಾಗಿತ್ತು. ರಕ್ತಗತವಾಗಿ ಬಂದಿದ್ದ ನಟನೆ ಅವರನ್ನು ಪ್ರಬುದ್ಧ ನಟನನ್ನಾಗಿ ರೂಪಿಸಿತ್ತು.
ಬದುಕು ಇನ್ನೂ ದೊಡ್ಡದಿತ್ತು. ಅಕಾಲಿಕ ಅವರ ಮರಣವು ಅವರನ್ನು ಪ್ರೀತಿಸುವ, ಸಿನೆಮಾಗಳನ್ನು ಇಷ್ಟಪಡುವ ಕೋಟ್ಯಾಂತರ ಅಭಿಮಾನಿಗಳಲ್ಲಿ ಆಳವಾದ ದುಃಖವನ್ನು ತಂದಿದೆ. ಕನ್ನಡಿಗರ ಮನಸ್ಸು ಭಾರವಾಗಿದೆ, ವಿಷಾದ ಮಡುಗಟ್ಟಿದೆ!
Post a Comment