ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತನ್ನದಲ್ಲದ ತಪ್ಪಿಗೆ ಕೋಪಿಷ್ಟ ಯುವಕನಿಂದ ಹಲ್ಲೆಗೊಳಗಾದ ವಿಜಯಮಹಾಂತೇಶ ವಿರುಪಾಕ್ಷಯ್ಯ ಹಿರೇಮಠ (74) ಗುರುವಾರ ಕೊಲೆಯಾಗಿ ಹೋಗಿದ್ದಾರೆ.
ಆಕಸ್ಮಿಕವಾಗಿ ನಡೆದ ದುರ್ಘಟನೆಯಲ್ಲಿ
ತಾಲೂಕಿನ ಎತ್ತಿನಕೇರಿ ಗ್ರಾಮದ ಅದೃಶ್ಯಪ್ಪ ಬಾಳಪ್ಪ ಶಿವಲಿಂಗನವರ (32) ಕೋಪದಿಂದ ಒದ್ದು ಕೊಲೆ ಮಾಡಿದ್ದಾನೆಂಬ ಆರೋಪಕ್ಕೆ ಒಳಗಾಗಿದ್ದಾನೆ.
ಎಂ. ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿವೃತ್ತ ನೌಕರ ವಿಜಯಮಹಾಂತೇಶ ಅವರು ಸೋಮವಾರ ಪೇಟೆಯಲ್ಲಿರುವ ಮನೆಯಿಂದ ಚೌಕೀಮಠ ಬಳಿಯಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗೆ ಹೋಗಿದ್ದರು.
ಅಲ್ಲಿಂದ ಮರಳಿ ಬರುವಾಗ ಚೌಕೀಮಠ ಬಳಿ ಅವರ ಎಂ. 80 ಬೈಕ್‍ಗೆ ಹಿಂದಿನಿಂದ ಬರುತ್ತಿದ್ದ ಕಾರ್‍ವೊಂದು ಸ್ವಲ್ಪ ತಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಬೈಕ್ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ವ್ಯಕ್ತಿ ಹಾಗೂ ಅವರ ಜೊತೆಗಿದ್ದ ಆರೋಪಿ ಅದೃಶ್ಯಪ್ಪ ಕೆಳಗೆ ಬಿದ್ದಿದ್ದಾರೆ.
ಘಟನೆಯ ವಿವರ ಅರಿಯದ ಅದೃಶ್ಯಪ್ಪ ಸಿಟ್ಟಿಗೆದ್ದು ಬೈಕ್ ಸವಾರ ವಿಜಯಮಹಾಂತೇಶ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ನೆಲಕ್ಕೆ ಬಿದ್ದ ಅವರನ್ನು ಶಕ್ತಿಹಾಕಿ ಒದ್ದಿದ್ದಾನೆ. ಇದರಿಂದ ಅವರ ಪ್ರಾಣಪಕ್ಷಿ ಹಾರಿಹೋಯಿತು ಎಂದು ಹೇಳಲಾಗಿದೆ.
ಕೊಲೆ ಮಾಡಿದನೆನ್ನಲಾದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ ಚಾಲಕ ಮಾಡಿದ ತಪ್ಪಿಗೆ ವಿಜಯಮಹಾಂತೇಶ ಇಲ್ಲಿ ಬಲಿಯಾಗಿ ಹೋಗಿದ್ದಾರೆ. ಇವೆಲ್ಲ ಘಟನಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದು, ವೈರಲ್ ಕೂಡಾ ಆಗಿವೆ.
ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment