ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ನಮ್ ಶಾಲೆ ಸ್ಲ್ಯಾಬ್ ಸೋರ್ತಾಯಿದೆ, ನಿಲ್ಲಿಸಬೇಕು..
ಕಿತ್ತೂರು ತಾಲೂಕಿನ ವೀರಾಪುರದಲ್ಲಿ ‘ಶನಿವಾರ ಜಿಲ್ಲಾಡಳಿತ ಇಟ್ಟುಕೊಂಡಿದ್ದ ‘ಗ್ರಾಮವಾಸ್ತವ್ಯ’ದಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರಿಗೆ ಗ್ರಾಮದ ವಿದ್ಯಾರ್ಥಿನಿಯಿಂದ ‘ಸಂವಾದ’ದಲ್ಲಿ ಈ ಪ್ರಶ್ನೆ ಎದುರಾಯಿತು.
‘ಪ್ರಕೃತಿ ವಿಕೋಪದಡಿ ಅದನ್ನು ದುರಸ್ತಿ ಮಾಡಿಸಲಾಗುತ್ತದೆ’ ಎಂದು ಅವರು ಭರವಸೆ ನೀಡಿದರು.
‘ಶಾಲೆಯ ಮೈದಾನವನ್ನೂ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮತಟ್ಟು ಮಾಡಿಸಲಾಗುವುದು’ ಎಂದು ಹೇಳಿದ ಅವರು, ‘ಕ್ರಿಯಾ ಯೋಜನೆಯಲ್ಲಿ ಇದನ್ನು ಸೇರಿಸಬೇಕು’ ಎಂದು ಸ್ಥಳದಲ್ಲಿದ್ದ ಅಧಿಕಾರಿಗೆ ಸೂಚನೆ ನೀಡಿದರು.
‘ಶಾಲೆಗಳಲ್ಲಿ ಕಂಪ್ಯೂಟರ್‍ಗಳಿವೆ, ಆದರೆ ಅದನ್ನು ಕಲಿಸುವ ಶಿಕ್ಷಕರು ಬೇಕು’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಕೇಳಿದರು. ‘ಕಂಪ್ಯೂಟರ್ ಜ್ಞಾನ ಬಂದರೆ ಕಲಿತ ವ್ಯಕ್ತಿ ಎನ್ನುವಂತಾಗಿದೆ. ಖಾಸಗಿಯವರಿಂದಲಾದರೂ ಈ ಅಗತ್ಯ ಜ್ಞಾನ ವಿದ್ಯಾರ್ಥಿಗಳಿಗೆ ಕೊಡಿಸಬೇಕು’ ಎಂದು ಸೂಚಿಸಿದರು.
ಡಿಸಿ ಆಗ್ಬೇಕಂತ ಕನಸು ಇತ್ತಾ?
‘ಡಿಸಿ (ಜಿಲ್ಲಾಧಿಕಾರಿ) ಆಗ್ಬೇಕಂತ ನಿಮಗೆ ಕನಸಿತ್ತಾ’ ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಯುಪಿಎಸ್‍ಸಿ ಪರೀಕ್ಷೆ ಬರೆದೆ, ಆದರೆ ಆಯ್ಕೆಯಾಗಲಿಲ್ಲ. ಕೆಪಿಎಸ್‍ಸಿ ಪರೀಕ್ಷೆ ಬರೆದೆ. ಇಲ್ಲೂ ಡಿಸಿ ಆಗಬಹುದು ಎನ್ನಿಸಿತು. ಡಿಸಿ ಆದೆ. ಸ್ವಂತ ಜಿಲ್ಲೆಗೆ ಬರ್ಬೇಕು ಎನ್ನುವುದಿತ್ತು. ಸ್ವಂತ ಜಿಲ್ಲೆಗೂ ಬಂದಿದ್ದೇನೆ, ಇದೂ ಆಸೆ ನೆರವೇರಿದೆ’ ಎಂದರು.
‘ನಿರಂತರ ಪ್ರಯತ್ನ, ಕಠಿಣ ಶ್ರಮ ಹಾಗೂ ಛಲ ಇದ್ದರೆ ಐಎಎಸ್ ಆಗಬಹುದು. ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕು. ಶಿಕ್ಷಕರು ಹೇಳುವ ಪಾಠ ಚೆನ್ನಾಗಿ ಆಲಿಸಬೇಕು. ಒಳ್ಳೆಯ ಮಾಕ್ರ್ಸ್ ಪಡೆದು ಪಾಸಾಗಬೇಕು. ಕನ್ನಡದಲ್ಲೂ ಕೆಎಎಸ್ ಬರೆದು ಪಾಸಾಗುತ್ತಿದ್ದಾರೆ. ಐಎಎಸ್‍ಗೆ ಇಂಗ್ಲೀಷ್‍ನಲ್ಲಿ ಬರೆಯಬೇಕು. ಸರ್ಕಾರಿ ಶಾಲೆಗಳಲ್ಲೂ ಒಳ್ಳೆಯ ಶಿಕ್ಷಕರು ಬರುತ್ತಿದ್ದಾರೆ. ಮೆರಿಟ್ ಮೇಲೆ ಆಯ್ಕೆಯಾದ ಶಿಕ್ಷಕರು ಇಲ್ಲಿರುತ್ತಾರೆ. ಖಾಸಗಿಯವರಿಗಿಂತ ಸರ್ಕಾರಿ ಶಾಲೆಗಳೇ ಉತ್ತಮವಾಗಿವೆ. ಅಲ್ಲಿಯೂ ಉತ್ತಮ ಶಿಕ್ಷಣ ಸಿಗ್ತಾಯಿದೆ’ ಎಂದಾಗಿ ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
‘ನಿವೃತ್ತಿ ನಂತರ ಪ್ಲಾನ್ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತ ಇರುತ್ತೇನೆ’ ಎಂದೂ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ ಇಲಾಖೆ ಉಪನಿರ್ದೇಶಕ ಚನಬಸಪ್ಪ ಕೊಡ್ಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಇಓ ಸುಭಾಸ ಸಂಪಗಾಂವಿ, ಜಿಲ್ಲೆಯ ಮತ್ತು ತಾಲೂಕಿನ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲೆಗಾಗಿ 3 ಕಿಮೀ ನಡೆದೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ಬೈಲಹೊಂಗಲ ತಾಲೂಕು ಗಣಿಕೊಪ್ಪ ನನ್ನೂರು. ಅಲ್ಲಿ 6 ನೇ ವರ್ಗದವರೆಗೆ ಶಾಲೆಯಿತ್ತು. ಹೀಗಾಗಿ 7 ನೇ ತರಗತಿಗಾಗಿ ನಮ್ಮೂರಿಂದ 3 ಕಿ.ಮೀ ದೂರದಲ್ಲಿರುವ ಬಸಾಪುರ ಶಾಲೆಗೆ ಸೇರಿದೆ. ಶಾಲೆ ಇದ್ದಾಗ ನಿತ್ಯವೂ ಮೂರು ಕಿ.ಮೀ ನಡೆದುಕೊಂಡೇ ಹೋಗುತ್ತಿದ್ದೆ’ ಎಂದು ಅವರು ಪ್ರಾಥಮಿಕ ಶಾಲೆಯ ಅಂದಿನ ದಿನಗಳನ್ನು ‘ಸಂವಾದ'ದಲ್ಲಿ ಸ್ಮರಿಸಿಕೊಂಡರು.
Post a Comment