ಕಬ್ಬು ಬೆಳೆಗಾರರ ಬಾಕಿ ಬಿಲ್ ನೀಡಿ
ಪ್ರೆಸ್‍ಕ್ಲಬ್ ವಾರ್ತೆ
ದೊಡವಾಡ: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ರೈತರ ಬಿಲ್ ನೀಡಬೇಕು ಹಾಗೂ ಪ್ರಸಕ್ತ ಸಾಲಿನ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ನೇಗಿಲಯೋಗಿ ರೈತಸಂಘದ ಕಾರ್ಯಕರ್ತರು ವ್ಯವಸ್ಥಾಪಕ ನಿರ್ದೇಶಕ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ರವಿ ಪಾಟೀಲ ಹಾಗೂ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮಲ್ಲಯ್ಯ ಪೂಜಾರ ಮಾತನಾಡಿ 2020-21 ನೇ ಸಾಲಿನಲ್ಲಿ ಕಾರ್ಖಾನೆಗೆ ಪೂರೈಸಲಾಗಿರುವ ಕಬ್ಬಿಗೆ ರೂ. 2700 ನಿಗದಿ ಪಡಿಸಿ ಖರೀದಿಸಲಾಗಿದೆ. ಆದರೆ ರೂ. 2400 ಮಾತ್ರ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಬಾಕಿ ಇರುವ ರೂ. 300 ರೈತರ ಖಾತೆಗಳಿಗೆ ಶೀಘ್ರ ಜಮೆ ಮಾಡಬೇಕು ಎಂದು ಕೋರಿದರು.
ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಪ್ರತಿ ಮೆ. ಟನ್ ಕಬ್ಬಿಗೆ ರೂ. 3700 ರೂ ಬೆಲೆ ನಿಗದಿ ಪಡಿಸಿ ಖರೀದಿಸಬೇಕು. ಬಾಕಿ ಹಣ ಬಿಡುಗಡೆ ಮಾಡುವುದರಿಂದ ರೈತರಿಗೆ ಕಬ್ಬು ಪೂರೈಕೆಗೆ ಸಹಾಯವಾಗುವುದು. ಇದಕ್ಕೆ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಎದುರು ಸಾವಿರಾರು ರೈತರ ಜತೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಅವರು ಎಚ್ಚರಿಸಿದರು.
ಸಂಘದ ಜಿಲ್ಲಾ ಸಂಚಾಲಕ ಗಂಗಪ್ಪ ಶಿಂತ್ರಿ, ಸಂಜು ಮಾದರ, ತಾಲೂಕು ಘಟಕದ ಅಧ್ಯಕ್ಷ ಈರಪ್ಪ ಉಳ್ಳಿಗೇರಿ, ಬಸಪ್ಪ ಯಡಳ್ಳಿ, ನಿಂಗಪ್ಪ ಕುರಿ, ಶಿವಾನಂದ ನರಗಟ್ಟಿ, ಸಂಗಪ್ಪ ಸವಟಗಿ, ಅದೃಶ್ಯ ಎಡಳ್ಳಿ, ಬಸವಂತ ಅಡಕಿ, ಸುಭಾಸ ಬೆಣ್ಣಿ, ಈರಪ್ಪ ಗಣಾಚಾರಿ, ಮಡಿವಾಳಪ್ಪ ಗಣಾಚಾರಿ, ಈರಪ್ಪ ನಿಕ್ಕಮ್ಮನವರ ಹಾಗೂ ಬೈಲಹೊಂಗಲ, ಖಾನಾಪೂರ, ಕಿತ್ತೂರು ಭಾಗದ ರೈತರು ಇದ್ದರು.
Post a Comment