ಕಾಂಗ್ರೆಸ್ ಬೆಂಬಲಿಗನ ಮುಗಿಸಲು ಸಂಚು ನಡೆದಿದೆಯೇ?
ಪ್ರೆಸ್ಕ್ಲಬ್ ವಾರ್ತೆ
ಧಾರವಾಡ: ಕಾಂಗ್ರೆಸ್ ಬೆಂಬಲಿಗ ಎನ್ನಲಾದ ಆನಂದ ತಳವಾರ ಹತ್ಯೆಗೆ ಬಿಜೆಪಿ ಸ್ಥಳೀಯ ಮುಖಂಡನೊಬ್ಬ ಪ್ಲಾನ್ ಹೇಳಿಕೊಡುತ್ತಿರುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಅ. 2 ರಂದು ವೈರಲ್ ಆಗಿದ್ದು, ಜಿಲ್ಲಾದ್ಯಂತ ತಲ್ಲಣ ಸೃಷ್ಟಿಸಿದೆ.
ಇಬ್ಬರ ನಡುವಿನ ಬಡಿದಾಟದ ಪ್ರಕರಣವನ್ನು ಎರಡು ಪಕ್ಷಗಳ ಮುಖಂಡರ ಮನೆ ಬಾಗಿಲಿಗೆ ತಂದು ನಿಲ್ಲಿಸುವ ಪ್ರಯತ್ನಗಳು ಸಾಗಿವೆಯೇ ಎಂಬ ಅನುಮಾನವೂ ಕೆಲವರನ್ನು ಕಾಡುತ್ತಿದೆ.
ಬಿಜೆಪಿ ಸ್ಥಳೀಯ ಉಪಾಧ್ಯಕ್ಷನೊಬ್ಬ ತನ್ನ ಅಳಿಯನೊಂದಿಗೆ ಈ ವಿಚಾರವಾಗಿ ಮಾತನಾಡಿದ್ದಾನೆ ಎನ್ನುವ ಆಡಿಯೋ ಈಗ ಅನೇಕರ ಮೊಬೈಲ್ಗಳಲ್ಲಿ ಹರಿದಾಡುತ್ತಿದೆ.
ಆತನನ್ನು ಹೇಗೆ ಮುಗಿಸುವುದು, ಮುಗಿಸಿದ ಮೇಲೆ ಶವವನ್ನು ಸಮುದ್ರಕ್ಕೆ ಎಸೆದು ಬಂದ ಬಿಡಬೇಕು. ಇಲ್ಲದಿದ್ದರೆ ಎಂ. ಕೆ. ಹುಬ್ಬಳ್ಳಿಯ ಮಲಪ್ರಭಾ ನದಿಗೆ ಎಸೆ. ಸೆರೆ ಕುಡಿದು ಕೆಲಸ ಮಾಡಬೇಡ. ಕಾದು ಹೊಡಿ.. ಎಂಬಿತ್ಯಾದಿ ಸಂಭಾಷಣೆ ವೈರಲ್ ಆಗಿದೆ.
ಕೆಲಸ ಮುಗಿದ ಮೇಲೆ ಈ ಹತ್ಯೆಯ ಸಂಪರ್ಕಕ್ಕೆ ಬಳಸಲಾಗಿರುವ ಮೊಬೈಲ್ ಕೂಡಾ ಹೇಗೆ ನಾಶ ಪಡಿಸಬೇಕು ಎಂಬ ಬಗ್ಗೆ ನಿರ್ದೇಶನ ನೀಡಿದ ಮಾಹಿತಿ ಕೂಡಾ ಮಾತುಕತೆಯಲ್ಲಿದೆ.
ಆನಂದ ತಳವಾರ ಕೂಡಾ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ‘ಹೀಗೆಲ್ಲ ಮಾತನಾಡಿದವ ಈರನಗೌಡ ಪಾಟೀಲ ಆಗಿದ್ದಾನೆ. ಈತ ಬಿಜೆಪಿ ಉಪಾಧ್ಯಕ್ಷ ಆಗಿದ್ದಾನೆ. ಅಂವ ಹೀಗೇಕೆ ಮಾಡುತ್ತಿದ್ದಾನೋ ಗೊತ್ತಿಲ್ಲ' ಎಂದೂ ಆತ ಹೇಳಿಕೊಂಡಿದ್ದಾನೆ.
ಆಡಿಯೋ ಸಂಭಾಷಣೆ ಸತ್ಯಾಸತ್ಯತೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.