‘ಅಪರೂಪದ ಸಾಧಕನ ಅಗಲಿಕೆ ಆಘಾತಕಾರಿ'
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ಸ್ಯಾಂಡಲ್‍ವುಡ್ ಪವರ್ ಸ್ಟಾರ್, ವಿನಯವಂತ ಹಾಗೂ ಅಪರೂಪದ ಸಾಧಕ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಕಂಬನಿ ಮಿಡಿದಿರುವ ಇಲ್ಲಿಯ ಶ್ರೀಮಾತಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಅವರು, ಚಿತ್ರರಂಗದ ಅಪರೂಪದ ಸಾಧಕ ಅವರಾಗಿದ್ದರು ಎಂದು ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಪುನೀತ್ ರಾಜಕುಮಾರ್ ಪಾರ್ಥೀವ ಶರೀರಕ್ಕೆ ಶನಿವಾರ ಅಂತಿಮ ಗೌರವ ಸಲ್ಲಿಸಿದ ನಂತರ ದೂರವಾಣಿ ಮೂಲಕ ಅವರು ಮಾತನಾಡಿ, ಕನ್ನಡ ಚಿತ್ರರಂಗದ ಧ್ರುವತಾರೆ ಆಗಿದ್ದ ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ತಂದೆ ರಾಜಕುಮಾರ್ ಅವರಂತೆ ಆಧ್ಯಾತ್ಮಿಕ ಜೀವನ ರೂಢಿಸಿಕೊಂಡಿದ್ದರು. ದೊಡ್ಮನೆ ಕುಟುಂಬದ ಕುಡಿ ಅಗಲಿರುವುದು ವೈಯಕ್ತಿಕವಾಗಿ ನಮಗೂ ಬಹಳ ನೋವು ತರಿಸಿದೆ ಎಂದು ಮರುಗಿದರು.
ಉತ್ತರ ಕರ್ನಾಟಕದ ಗಂಡುಮೆಟ್ಟಿನ ನಾಡಾಗಿರುವ ಬೆಳಗಾವಿ ಮತ್ತು ಹುಬ್ಬಳ್ಳಿ ಭಾಗದ ಪೂಜ್ಯರು, ಗುರುಗಳನ್ನು ಕಂಡರೆ ಅವರನ್ನು ತುಂಬಾ ಭಕ್ತಿ ಮತ್ತು ಗೌರವದಿಂದ ಕಾಣುತ್ತಿದ್ದರು. ತಂದೆಯಂತೆಯೇ ಕೋಟ್ಯಾಂತರ ಕನ್ನಡ ಜನರ ಪ್ರೀತಿ, ಮನ್ನಣೆ ಗಳಿಸಿದ್ದರು ಎಂದು ಬಣ್ಣಿಸಿದರು.
ನೂರಾರು ಬಡಕುಟುಂಬಗಳಿಗೆ ಹಾಗೂ ಬಡಮಕ್ಕಳಿಗೆ ಆಶ್ರಯದಾತರಾಗಿ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ಪುನೀತ್ ರಾಜಕುಮಾರ್ ನಮ್ಮನ್ನು ಬಿಟ್ಟು ಆಗಲಿದ್ದಾರೆ. ಇದು ಬರೀ ದೊಡ್ಮನೆಗಾದ ನಷ್ಟವಲ್ಲ, ಇಡೀ ಕರ್ನಾಟಕಕ್ಕೆ ಆದ ಬಹುದೊಡ್ಡ ಹಾನಿಯಾಗಿದೆ ಎಂದರು.
ಇಷ್ಟು ಬೇಗ ಅವರನ್ನು ವಿಧಿ ಕರೆದುಕೊಂಡು ಬಿಟ್ಟಿದೆ. ನಮ್ಮ ದೇವಸ್ಥಾನದ ಬಗ್ಗೆ ಬಹಳಷ್ಟು ಪ್ರೀತಿ ಮತ್ತು ವಿಶ್ವಾಸಗಳಿಂದ ಇರುವಂಥದ್ದು ರಾಜ್ ಕುಟುಂಬವಾಗಿದೆ ಎಂದು ಅವರು ಸ್ಮರಿಸಿದರು.
Post a Comment