ಸಮನ್ವಯತೆಯ ಸಾಕಾರಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರೀಜಿ
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ಸಮನ್ವಯತೆಯ ಸಾಕಾರಮೂರ್ತಿ ಆಗಿರುವ ವೇದಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರಿ ಅವರು ಎಲ್ಲರನ್ನೂ ಪ್ರೀತಿಯಿಂದ ತೆಗೆದುಕೊಂಡು ಹೋಗುವ ದೊಡ್ಡಗುಣ ಹೊಂದಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಮಾಡಲಗಿ ಬಣ್ಣಿಸಿದರು.
ನವರಾತ್ರಿ ಹಬ್ಬದ 8 ನೇ ದಿನವಾದ ಗುರುವಾರ ಇಲ್ಲಿಯ ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಿಯ ದೇವಸ್ಥಾನದಲ್ಲಿ ಹಿಂದೂ ಮಹಾ ಚಂಡಿಕಾಯಾಗದ ಶತರುದ್ರ ಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿಯೇ ವಿಶೇಷ ರೀತಿಯಾಗಿ ದಸರಾ ಆಚರಣೆಯನ್ನು ಶಾಸ್ತ್ರಿಗಳು ಮಾಡುತ್ತ ಬಂದಿದ್ದಾರೆ ಎಂದರು.
ನವದುರ್ಗಾ ಮಾತೆಯ ಪೂಜೆಯಲ್ಲಿ ಅದ್ವಿತೀಯ ಶಕ್ತಿ ಅಡಗಿದೆ. ಸಾರ್ವಜನಿಕರ ಸಂಕಷ್ಟ ಮತ್ತು ನೋವುಗಳಿಗೆ ಸ್ಪಂದನೆ ಮಾಡುವ ಡಾ. ಮಹಾಂತಯ್ಯ ಶಾಸ್ತ್ರಿ ಅವರದು ಅದ್ಭುತ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ,
ದುರ್ಗಾಮಾತೆ ಆರಾಧನೆ ಮಾಡುವುದರಿಂದ ದುಃಖ, ದುಮ್ಮಾನಗಳು ದೂರವಾಗುತ್ತವೆ. ಜಾತಿ- ಧರ್ಮ, ಪಂಥ-ಪಂಗಡ ಮೀರಿ ಎಲ್ಲರೂ ಆಚರಿಸುವ ಹಬ್ಬ ವಿಜಯದಶಮಿಯಾಗಿದೆ ಎಂದರು.
ಯಲ್ಲಮ್ಮ ದೇವಿ ದೇವಸ್ಥಾನ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿ, ದಸರಾ ಹಬ್ಬದ ಪ್ರಯುಕ್ತ ನಡೆದಿರುವ ಚಂಡಿಕಾಯಾಗದಲ್ಲಿ ನಾನೂ ಭಾಗವಹಿಸಿರುವುದು ನನ್ನ ಪೂರ್ವಜನ್ಮದ ಪುಣ್ಯವಾಗಿದೆ ಎಂದು ನುಡಿದರು.
ಸಂಸದೆ ಮಂಗಲಾ ಅಂಗಡಿ ಅವರ ಪುತ್ರಿ ಶ್ರದ್ಧಾ ಅಂಗಡಿ ಹೋಮದಲ್ಲಿ ಪಾಲ್ಗೊಂಡು ತಾಯಿ ದುರ್ಗೆಯ ಆಶೀರ್ವಾದ ಪಡೆದರು.
ಶಂಕರ ಮಾಡಲಗಿ, ರವಿ ಕೋಟಾರಗಸ್ತಿ ಹಾಗೂ ಬಸಯ್ಯ ಹಿರೇಮಠ ದಂಪತಿಯನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.
ಜಗದೀಶ ಗುರು ಮೆಟಗುಡ್ಡ, ಗುರುಪಾದ ಕಳ್ಳಿ, ಆನಂದ ತುರುಮರಿ ಸಮಾರಂಭದಲ್ಲಿದ್ದರು.
Post a Comment