ಹಾಜಿ ಮಸ್ತಾನೊ.. ಏನ್ ಗೋಮಾಜ್ ಕಾಪ್ಸೆನೊ..?
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ‘ಅಂವೇನ ಹಾಜಿ ಮಸ್ತಾನೊ, ಏನ್ ಗೋಮಾಜ್ ಕಾಪ್ಸೆನೊ..’ ಎಂಬ ವ್ಯಂಗ್ಯದ ಮಾತನ್ನು ಅನೇಕರು ಕೇಳಿರಲು ಸಾಧ್ಯವಿದೆ. ಅಂಥ ‘ದೊಡ್ಡ' ವ್ಯಕ್ತಿತ್ವವನ್ನು ಅವರು ಹೊಂದಿದ್ದರೆ ಅಥವಾ ಅವರಿಲ್ಲದೆ ಏನೂ ಕೆಲಸವೇ ಆಗುತ್ತಿರಲಿಲ್ಲವೇ ಎನ್ನುವ ಕುತೂಹಲ ಈ ಮಾತಿನಿಂದ ಎಲ್ಲರಿಗೆ ಆಗುವುದು ಸಹಜ.
ಬಹುಶಃ ಹಾಜಿ ಮಸ್ತಾನ್ ಹೆಸರು ಮತ್ತು ಆತನ ಭೂಗತ ಚಟುವಟಿಕೆಗಳನ್ನು ಅನೇಕರು ಓದಿರಲು ಸಾಧ್ಯವಿದೆ. ಪ್ರಧಾನಿ ಜೊತೆ ಆತನ ಒಡನಾಟವಿತ್ತು. ಆತನ ಮನೆಯಲಿಯೇ ಕಾರ್ ಹೋಗುತ್ತಿತ್ತು. ಆತನವು ಅನೇಕ ಹಡಗುಗಳು ಇದ್ದವು ಎಂದು ವೈಭವೀಕರಿಸಿ ಹೇಳುವ ರಸವತ್ತಾದ ಕತೆಗಳನ್ನು ಕೇಳಿರಲು ಸಾಕು.
ಹಾಜಿ ಮಸ್ತಾನ್ ವ್ಯಕ್ತಿತ್ವವೇ ಹಾಗಿತ್ತು. ಆತ ಮುಂಬೈ ಭೂಗತ ಲೋಕದ ದೊರೆ. ಬೃಹತ್ ಭೂಗತ ಸಾಮ್ರಾಜ್ಯ ಹುಟ್ಟು ಹಾಕಿ 1960 ರಿಂದ 80 ವರೆಗೆ ಎರಡು ದಶಕದ ಕಾಲ ಮುಂಬೈ ಆಳಿದವ. ಸ್ಲಂ ಏರಿಯಾಗಳಲ್ಲಿ ‘ರಾಬಿನ್ ಹುಡ್' ಎಂದೇ ಖ್ಯಾತನಾದವ. ಕಳ್ಳತನ, ಸುಲಿಗೆ, ಸಿನಿಮಾ ಬ್ಲಾಕ್ ಟಿಕೆಟ್ ಮಾರಾಟದಿಂದ ಜೀವನ ಆರಂಭಿಸಿ ದೊಡ್ಡ ಶ್ರೀಮಂತ ಸಾಮ್ರಾಜ್ಯ ಸ್ಥಾಪಿಸಿದವ. ಕೊಪ್ಪರಿಗೆಗಟ್ಟಲೇ ದುಡ್ಡು ಮಾಡಿದ. ಅದನ್ನು ಬಾಲಿವುಡ್ ಸಿನಿಮಾ ಲೋಕದಲ್ಲೂ ಸುರಿದ. ಮುಂಬೈ ಭೂಗತ ಜಗತ್ತಿನ ಪವರ್ ಬ್ರೋಕರ್ ಆಗಿ ಮೆರೆದವ ಮಸ್ತಾನ್.
ಈತನಿಗೆ ರಾಜಕಾರಣಿಗಳು ಹಾಗೂ ಅಂದಿನ ಪೊಲೀಸ್‍ರೊಂದಿಗೆ ನಿಕಟ ಸಂಪರ್ಕವಿತ್ತು. ಕಾನೂನು ಬಾಹಿರ ಕೃತ್ಯ ನಡೆಸಲು ಇದು ಆತನ ನೆರವಿಗೆ ಬಂದಿತ್ತು ಎಂದೂ ಹೇಳಲಾಗುತ್ತದೆ.
ಶ್ವೇತ ವರ್ಣ ತುಂಬಾ ಇಷ್ಟ ಪಡುತ್ತಿದ್ದ ಈತ, ಮರ್ಸಿಡಿಸ್ ಬೆಂಚ್ ಕಾರ್‍ನಲ್ಲಿ ಓಡಾಡುತ್ತಿದ್ದ. ಮಧುಬಾಲಾ ಈತನ ಮೆಚ್ಚಿನ ನಟಿ. ಇವರಂತೆ ಹೋಲಿಕೆಯಿದ್ದ ನಟಿ ಸೋನು ಎಂಬುವಳನ್ನು ಈತ ವಿವಾಹವಾದನು.
ಜಯಪ್ರಕಾಶ್ ನಾರಾಯಣ ಅವರ ವಿಚಾರಗಳಿಗೆ ಮಾರು ಹೋಗಿದ್ದ. ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸುವ ಛಾತಿಯನ್ನೂ ತೋರಿದ್ದ. ಹೀಗೆ ಮಾಡಿದ್ದರಿಂದ ಜೈಲಿಗೂ ತಳ್ಳಲಾಗಿತ್ತು. ಬಿಡುಗಡೆಯಾಗಿ ಬಂದ ನಂತರ ಅಖಿಲ ಭಾರತ ದಲಿತ ಮುಸ್ಲಿಂ ಮಹಾಸಂಘ ಸ್ಥಾಪಿಸಿದ್ದ.
ಆದರೆ ಇದಕ್ಕಿಂತ ಭಿನ್ನವಾದ ಕತೆ ಗೋಮಾಜಿ ಕಾಪ್ಸೆ ಅವನದು. ಆತ ಇಂದಿನ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾತ್ಕಾಲಿಕ ನೌಕರನಾಗಿದ್ದನಂತೆ. ಅಲ್ಲಿನ ಕೆಲವರಿಗೆ ದುಡ್ಡು ಮಾಡಿ ಕೊಡುವುದು, ಅದರಲ್ಲಿ ತಾನೂ ಅಲ್ಪ ಉಳಿಸಿಕೊಂಡು ಜೀವನ ಸಾಗಿಸುವುದು ಆತನ ಪದ್ಧತಿಯಾಗಿತ್ತಂತೆ.
ಒಚಿದಿನ ಆತನನ್ನು ಕಚೇರಿಯಲ್ಲಿ ಬೇಡ ನೀನು ಹೊರಗೆ ಕುಳಿತು ಈ ಕೆಲಸ ಮಾಡು ಎಂದರಂತೆ. ಕಚೇರಿ ಎದುರಿಗಿದ್ದ ಮರದ ಕೆಳಗೆ ಕುಳಿತು ಅದೇ ಕೆಲಸ ಮುಂದುವರೆಸಿದನಂತೆ. ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರಿಗೆ ಗೋಮಾಜಿ ಕಡೆಯಿಂದ ‘ಸಿಕ್ಕಾ ಹೊಡೆಸಿಕೊಂಡು ಬಾ’ ಎನ್ನುತ್ತಿದ್ದರಂತೆ ಕಚೇರಿಯ ಸಿಬ್ಬಂದಿ. ಅವರಿಂದ ‘ಕಾಣಿಕೆ' ಪಡೆದು ಮೊಹರು ಒತ್ತಿ ಕೊಡುತ್ತಿದ್ದನಂತೆ ಗೋಮಾಜಿ. ಈತನ ಕಡೆಗೆ ಹೋಗಿ ಸಿಕ್ಕಾ ಹಾಕಿಸಿಕೊಂಡು ಬರದಿದ್ದರೆ ಅವರ ಕೆಲಸವೇ ಆಗುತ್ತಿರಲಿಲ್ಲವಂತೆ. ಅವನ ಮನೆ ಹೆಸರು ಕಾಪ್ಸೆ. ಆವಾಗಿನಿಂದ ಗೋಮಾಜ್ ಕಾಪ್ಸೆ ಹೆಸರು ಚಾಲ್ತಿಯಲ್ಲಿ ಬಂದಿತು. ಆಗಿನಿಂದ ಅಂವೇನು ಹಾಜಿ ಮಸ್ತಾನೊ, ಏನ್ ಗೋಮಾಜ್ ಕಾಪ್ಸೆನೊ ಎಂಬ ಮಾತು ಚಾಲ್ತಿಯಲ್ಲಿ ಬಂದಿದೆ. ಈಗಲೂ ಈ ಮಾತು ನುಡಿಗಟ್ಟಿನಂತೆ ಮುಂದುವರೆದಿದೆ. ಇದನ್ನೆಲ್ಲ ಬರದೆಲ್ಲಾ, ‘ನೀ ಹಾಜಿ ಮಸ್ತಾನೊ, ಏನ್ ದೊಡ್ಡ ಗೋಮಾಜಿ ಕಾಪ್ಸೆಯೊ ಎಂದು ಪ್ರಶ್ನಿಸಬೇಡಿ!
Post a Comment