ನವರಾತ್ರಿ ಉತ್ಸವ: ಚಂಡಿಕಾ ಯಾಗ, ಲಕ್ಷ ದುರ್ಗಾ ಪಾರಾಯಣ
ಪ್ರೆಸ್ಕ್ಲಬ್ ವಾರ್ತೆ
ಬೈಲಹೊಂಗಲ: ನವದುರ್ಗೆ ಪೂಜೆಯನ್ನು ದೇಶಾದ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಮಾಡಲಾಗುತ್ತಿದ್ದು, ಮಾತೆಯು ನಾಡಿನಲ್ಲಿ ಸುಖ, ಸಮೃದ್ದಿ ದಯಪಾಲಿಸಲಿ ಎಂದು ಬೆಳಗಾವಿ ಕಾಡಾ ಅಧ್ಯಕ್ಷ ಡಾ ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ಮುರಗೋಡ ರಸ್ತೆಯ ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ನವರಾತ್ರಿ ಉತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಚಂಡಿಕಾ ಯಾಗ ಹಾಗೂ ಲಕ್ಷ ದುರ್ಗಾ ಪಾರಾಯಣ ಜಪ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವಸ್ಥಾನದ ಧರ್ಮದರ್ಶಿ ಡಾ. ಮಹಾಂತೇಶ ಶಾಸ್ತ್ರಿ ಅವರು ಲೋಕ ಕಲ್ಯಾಣಕ್ಕಾಗಿ ದೇವಿ ಪಾರಾಯಣ, ನವಚಂಡಿಕಾ ಹೋಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರೂ ಒಂಬತ್ತು ದಿನಗಳ ಕಾಲ ಅತ್ಯಂತ ಕಠಿಣ ಉಪವಾಸ ವೃತ ಕೈಗೊಂಡು ದೇವಿ ಆರಾಧನೆ ಮಾಡುತ್ತಾರೆ. ಅವರ ದೇವರಯೆಡೆಗಿನ ಶ್ರದ್ಧೆ ಮತ್ತು ಭಕ್ತಿ ಅನುಕರಣೀಯವಾಗಿದೆ ಎಂದು ಬಣ್ಣಿಸಿದರು.
ಸಾನಿಧ್ಯ ವಹಿಸಿದ್ದ ದೇವಸ್ಥಾನದ ಧರ್ಮದರ್ಶಿ ಡಾ. ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ದೇವಿನಾಮ ಜಪ ಮಾಡುವುದರಿಂದ ಅನುಭೂತಿಯು ಸಿಗುತ್ತದೆ. ನವರಾತ್ರಿ ಸಂದರ್ಭದಲ್ಲಿ ದೇವಿತತ್ವವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತ ಆಗಿರುವುದರಿಂದ ಪಾರಾಯಣ ಮಾಡಿದವರಿಗೆ ಅದರ ಲಾಭ ತಟ್ಟುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ದೇವಿ ಆರಾಧನೆ ಮಾಡುವುದರಿಂದ ಸಕಲ ಕಷ್ಟಗಳು ಮತ್ತು ದೋಷಗಳು ಪರಿಹಾರವಾಗುತ್ತವೆ ಎಂದರು.
ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅನಂತಕುಮಾರ್ ಬ್ಯಾಕೋಡ, ಬಾಬಾಸಾಹೇಬ ಪಾಟೀಲ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಅಡಿವೆಪ್ಪ ಕಾಜಗಾರ, ಸಿದ್ರಾಮ ಲಿಂಗಶೆಟ್ಟಿ, ಕುಮಾರ ರೇಶ್ಮಿ ಸೇರಿದಂತೆ ದೇವಸ್ಥಾನದ ಸದ್ಭಕ್ತರು ಇದ್ದರು.