ಡಾ. ಕೋರೆ ಸೌಹಾರ್ದ ಸಹಕಾರಿಯ 46 ನೇ ಶಾಖೆ ಉದ್ಘಾಟನೆ - kittur


ರೂ. 35 ಕೋಟಿ ನೀರಾವರಿ ಸೌಲಭ್ಯಕ್ಕೆ ಸಾಲ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸಾವಿರ ಕೋಟಿ ವ್ಯವಹಾರ ಹೊಂದಿರುವ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ನೀರಾವರಿ ಸೌಲಭ್ಯಕ್ಕಾಗಿ ರೈತರಿಗೆ ರೂ. 35 ಕೋಟಿ ಸಾಲವನ್ನು ವಿತರಿಸಿದೆ ಎಂದು ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷರೂ ಆಗಿರುವ ಡಾ. ಪ್ರಭಾಕರ ಕೋರೆ ತಿಳಿಸಿದರು.
ಇಲ್ಲಿಯ ಬಾನಿ ಮಳಿಗೆಯಲ್ಲಿ ಶನಿವಾರ ಸಂಸ್ಥೆಯ 46 ನೇ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  30 ವರ್ಷದಲ್ಲಿ ರೂ. 1100 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಶೇ 860 ಕೋಟಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅತಿ ಕಡಿಮೆ ಬಡ್ಡಿ ದರದಲ್ಲಿ ಸಂಸ್ಥೆ ಸಾಲ ನೀಡುತ್ತ ಬಂದಿದೆ. ರೈತರ ಪರಿಸ್ಥಿತಿ ನಮಗೆ ಗೊತ್ತಿದೆ. ಹೀಗಾಗಿ ಅವರಿಗೆ ಹೆಚ್ಚು ಸಾಲ ನೀಡಿದ್ದೇವೆ ಎಂದರು.
ರಾಜ್ಯ ಸರ್ಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ನಮ್ಮ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅವರಿಗೆ ರೂ. 15 ಲಕ್ಷ ಹಾಗೂ ರೈತರಿಗೆ ರೂ. 5 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದರು.
ರೈತರ ಪಹಣಿ ಪತ್ರಿಕೆ ನೋಡಿದರೆ ಬಲಗಡೆ ಬಾಜುವಿನ ಕಾಲಂ ತುಂಬುವಷ್ಟು ಬ್ಯಾಂಕಿನ ಭೋಜಾ ದಾಖಲೆ ಮಾಡಿರುತ್ತಾರೆ. ಇಷ್ಟಿದ್ದರೂ ಡಾ. ಕೋರೆ ಸಂಸ್ಥೆಯು ಅವರ ಮೇಲೆ ವಿಶ್ವಾಸವಿಟ್ಟು ಸಾಲ ನೀಡುತ್ತ ಬಂದಿದೆ. ಏತ ನೀರಾವರಿಗೆ ಹೆಚ್ಚು ಸಾಲ ಕೊಟ್ಟಿದೆ ಎಂದು ವಿವರಿಸಿದರು.


ಶಾಖೆ ಉದ್ಘಾಟಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಸಹಕಾರಿ ಸಂಸ್ಥೆಗಳು ಬರದೇ ಇದ್ದರೆ, ರಾಷ್ಟ್ರೀಕೃತ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬರುತ್ತಿತ್ತು ಎಂದರು.
ಹಣದ ಭದ್ರತೆ ಸಿಕ್ಕರೆ ಸಾರ್ವಜನಿಕರು ಠೇವಣಿ ಇಡಲು ಮುಂದೆ ಬರುತ್ತಾರೆ. ಕೋರೆ ಅವರ ಸಂಸ್ಥೆಯಲ್ಲಿ ಎಷ್ಟೇ ಠೇವಣಿ ಇಟ್ಟರೂ ಮರಳಿ ಬರುತ್ತದೆ ಎಂಬ ವಿಶ್ವಾಸವಿದೆ. ಇದಕ್ಕೆ ಕೋರೆ ಎಂಬ ಹೆಸರು ಕಾರಣವಾಗಿದೆ ಎಂದು ನುಡಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾಣಿಕೊಪ್ಪ, ವಿಜಯ ಮೆಟಗುಡ್ಡ, ಚಿನ್ನಪ್ಪ ಮುತ್ನಾಳ, ಚನಬಸಪ್ಪ ಮೊಕಾಶಿ, ಅಪ್ಪಣ್ಣ ಪಾಗಾದ, ಎಸ್. ಆರ್. ಪಾಟೀಲ ಮಹಾಂತೇಶಗೌಡ ಪಾಟೀಲ, ಸ್ಥಳೀಯ ಶಾಖೆಯ ಆಡಳಿತ ಮಂಡಳಿಯ ಪದಾಧಿಕಾರಿಗಳಾದ   ರವೀಂದ್ರ ಇನಾಮದಾರ, ಉಳವಪ್ಪ ಉಳ್ಳೇಗಡ್ಡಿ, ಸಂದೀಪ ದೇಶಪಾಂಡೆ, ಬಸವರಾಜ ಪಾಟೀಲ, ಮೊದಿನಸಾಬ ಹವಾಲ್ದಾರ, ಕಿರಣ ಪಾಟೀಲ, ಸಂದೀಪ ಕಲಘಟಗಿ, ಕಿರಣ ವಾಳದ ವೇದಿಕೆಯಲ್ಲಿದ್ದರು.
ಡಾ. ಬಸವರಾಜ  ಪರವಣ್ಣವರ ಸ್ವಾಗತಿಸಿದರು. ಶಿವಾನಂದ ಹನುಮಸಾಗರ ನಿರೂಪಿಸಿದರು

 

0/Post a Comment/Comments