ಸಚಿವ ಕಾರಜೋಳ ಮಾತನಾಡಿದ ವಿಡಿಯೋ ನೋಡಿ...
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪ್ರಸಕ್ತ ಸಾಲಿನ ಇತಿಹಾಸ ಪ್ರಸಿದ್ಧ ಕಿತ್ತೂರು ರಾಣಿ ಚನ್ನಮ್ಮನ ಉತ್ಸವವನ್ನು ಅ. 23 ಹಾಗೂ 24 ರಂದು ಎರಡು ದಿನಗಳ ಕಾಲ ಸರಳ ಹಾಗೂ ಸುಂದರ ರೀತಿಯಲ್ಲಿ ಆಚರಿಸಲಾಗುವುದು ಎಂದು ಬೃಹತ್ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಘೋಷಿಸಿದರು.ಇಲ್ಲಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಉತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಉತ್ಸವದ 25 ನೇ ವರ್ಷಾಚರಣೆ ಅರ್ಥಪೂರ್ಣ ಆಚರಣೆ ಆಗಬೇಕೆಂಬ ಇಲ್ಲಿಯ ಸಾರ್ವಜನಿಕರ ಭಾವನೆ ಅರ್ಥ ಮಾಡಿಕೊಂಡಿರುವೆ. ಗತವೈಭವ ಅನಾವರಣಗೊಳ್ಳುವಂತೆ ಆಚರಿಸಲಾಗುವುದು ಎಂದು ಪುನರುಚ್ಛರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವ ಆಚರಣೆಗೆಂದು ರೂ. 75 ಲಕ್ಷ ಬಿಡುಗಡೆ ಮಾಡಿದ್ದಾರೆ. ಕೋವಿಡ್ ಕಡಿಮೆಯಾಗಿಲ್ಲ. ಅದರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮೂರನೇ ಅಲೆಯ ಎಚ್ಚರಿಕೆಯನ್ನು ತಜ್ಞರು ಕೊಟ್ಟಿದ್ದಾರೆ. ಈ ಮಧ್ಯೆಯೇ ಉತ್ಸವದ 25 ನೇ ಸಂಭ್ರಮಾಚರಣೆ ಆಗಬೇಕಿದೆ ಎಂದು ವಿವರಿಸಿದರು.
ಯುವ ಜನಾಂಗಕ್ಕೆ ಇತಿಹಾಸ ಓದುವ ಅಭಿರುಚಿ ಕಡಿಮೆ ಆಗಿದ್ದರಿಂದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಉತ್ಸವ ಆಚರಣೆಗೆ ಚಾಲನೆ ನೀಡಲಾಯಿತು. ಚಾಲುಕ್ಯ, ನವರಸಪುರ, ಕದಂಬ ಹಾಗೂ ಹಂಪಿ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು ಅವರ ಕಾಲದಲ್ಲಿ ಎಂದು ಸ್ಮರಿಸಿದರು.
ಕಿತ್ತೂರು ಉತ್ಸವ ಎಂದರೆ ಇದು ನಮ್ಮ ಮನೆಯ ಹಬ್ಬವಿದ್ದ ಹಾಗೆ. ಕೋಟೆಯ ಆವರಣವನ್ನು ಮನೆಗೊಬ್ಬರು ಬಂದು ಸ್ವಚ್ಛಗೊಳಿಸೋಣ. ಎಲ್ಲದಕ್ಕೂ ಸರ್ಕಾರದ ಕಡೆಗೆ ನೋಡುವುದು ಸಲ್ಲದು. ಸ್ವಚ್ಛತೆಗಾಗಿ ಟೆಂಡರ್ ಕರೆಯುವುದು, ಕೆಲಸ ಮಾಡಿಸುವುದು, ಇದಕ್ಕೊಬ್ಬನನ್ನು ಮೇಲುಸ್ತುವಾರಿಯಾಗಿ ನೇಮಿಸುವುದು ಬೇಡ ಎಂದು ಕಿವಿಮಾತು ಹೇಳಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಕಿತ್ತೂರು ಉತ್ಸವ ಆಚರಣೆಗೆ ಮೊದಲು ರೂ. 30 ಲಕ್ಷ ಅನುದಾನ ನೀಡಲಾಗುತ್ತಿತ್ತು. ಅನಂತರ ಇದು ರೂ. 70 ಲಕ್ಷಕ್ಕೆ ಏರಿಕೆಯಾಯಿತು. ಈಗ ಅದು 1 ಕೋಟಿ ತಲುಪಿದೆ ಎಂದು ಹೇಳಿದರು.
ಕಳೆದ 2018 ಹಾಗೂ 2019ರಲ್ಲಿ ಅತಿವೃಷ್ಟಿ ಹಾಗೂ ಕೊರೊನಾದಿಂದಾಗಿ ಉತ್ಸವ ಆಚರಣೆ ಅದ್ಧೂರಿಯಾಗಲಿಲ್ಲ. ಈಗಲೂ ಒಂದೆಡೆ ಕೊರೊನಾ ಭೀತಿಯಿದೆ. ಮತ್ತೊಂದೆಡೆ 25 ವರ್ಷದ ಸಂಭ್ರಮವಿದೆ ಎಂದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ರೂ. 50 ಕೋಟಿ ಬಿಡುಗಡೆಗೆ ಒಪ್ಪಿದೆ. ಇದರಲ್ಲಿ ಸದ್ಯ ರೂ. 10 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ಸಾಗಿವೆ. ಉಳಿದ ಮೊತ್ತವೂ ಹಂತ, ಹಂತವಾಗಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ಸ್ವಾಮೀಜಿ ಮಾತನಾಡಿ ಕಿತ್ತೂರು ಉತ್ಸವವು ಪರಂಪರೆ ಮತ್ತು ಸ್ವಾಭಿಮಾನದ ಇತಿಹಾಸವಾಗಿದೆ. ಇಲ್ಲಿಯ ಜನರ ಆಸೆಗೆ ಸ್ಪಂದನೆ ಸಿಕ್ಕಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಮಂತ್ರಿಸಬೇಕು ಹಾಗೂ 25 ರಂದು ಇತಿಹಾಸದ ಬಗ್ಗೆ ಉಪನ್ಯಾಸ ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿತ್ತೂರು ಪ್ರಾಧಿಕಾರದ ಆಯುಕ್ತ ಶಶಿಧರ ಬಗಲಿ ಸ್ವಾಗತಿಸಿದರು. ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಎಸ್. ಎಸ್. ಹಾದಿಮನಿ ನಿರೂಪಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಮಹೇಶ ಪತ್ರಿ, ಡಿಎಚ್‍ಓ ಎಸ್. ವಿ. ಮುನ್ಯಾಳ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳೇಗಡ್ಡಿ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಕಿತ್ತೂರು ವಂಶಸ್ಥರು, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.
Post a Comment