ಕಿತ್ತೂರು ಉತ್ಸವದ ಉಪಸಮಿತಿ ಸಭೆಯ ವಿಡಿಯೋ ನೋಡಿ...
ಕೇಂದ್ರ ಸಚಿವರಿಂದ ಉತ್ಸವಕ್ಕೆ ಚಾಲನೆ: ದೊಡ್ಡಗೌಡರ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇದೇ 23 ಹಾಗೂ 24 ರಂದು ನಡೆಯಲಿರುವ ಇತಿಹಾಸ ಪ್ರಸಿದ್ಧ ಕಿತ್ತೂರು ಉತ್ಸವಕ್ಕೆ ಕೇಂದ್ರ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಕಟಿಸಿದರು.
ಇಲ್ಲಿಯ ಕೋಟೆ ಆವರಣದೊಳಗಿರುವ ಸಭಾಭವನದಲ್ಲಿ ಭಾನುವಾರ ನಡೆದ ಕಿತ್ತೂರು ಉತ್ಸವ ಉಪಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
25 ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಐತಿಹಾಸಿಕ ಉತ್ಸವಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಆಮಂತ್ರಿಸಲಾಗುವುದು. ಮುಖ್ಯಮಂತ್ರಿಗಳನ್ನು ಕೇಳುವ ಪ್ರಯತ್ನವೂ ಸಾಗಿದೆ ಎಂದರು.
ಉತ್ಸವದಂಗವಾಗಿ ಬೈಲಹೊಂಗಲ ರಾಣಿ ಚನ್ನಮ್ಮ ಸಮಾಧಿಯಿಂದ ಹೊರಡುವ ವೀರಜ್ಯೋತಿ ಮೆರವಣಿಗೆಯು ಜಿಲ್ಲೆಯ 14 ತಾಲೂಕುಗಳಲ್ಲಿ ಸಂಚರಿಸಲಿದೆ. ಅಲ್ಲಿ ಸ್ವಾಗತ ಅಥವಾ ಬಿಳ್ಕೋಡುವ ಸಂದರ್ಭದಲ್ಲಿ ಅಲ್ಲಿಯ ಶಾಸಕರು, ತಹಶೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪಾಲ್ಗೊಳ್ಳುವಂತೆ ಕೋರಲಾಗುವುದು ಎಂದು ಮಾಹಿತಿ ನೀಡಿದರು.
ವಿಚಾರಗೋಷ್ಟಿ, ವಸ್ತುಪ್ರದರ್ಶನ, ಕ್ರೀಡಾಸ್ಪರ್ಧೆ, ನಿತ್ಯ ಎರಡು ದಿನ ಸಂಜೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಾಯಕ ವಿಜಯಪ್ರಕಾಶ್ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಮೆರವಣಿಗೆ ಸಾಗುವ ದಾರಿಯಲ್ಲಿ ಈ ಭಾಗದಲ್ಲಿ ಬೆಳೆದ ಪೈರುಗಳ ತೆನೆಗಳು, ಬಾಳೆ, ಕಬ್ಬು ಕಟ್ಟಿ ಅಂದ ಹೆಚ್ಚಿಸಬೇಕು. ಇದಕ್ಕೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಬೆಳೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಿದ್ದಾರೆ. ನಿಚ್ಚಣಕಿ ವರೆಗೂ ಮೆರವಣಿಗೆ ಸಾಗಲಿದೆ ಎಂದು ವಿವರಿಸಿದರು.
ಪ್ರತಿವರ್ಷ ಕೋಟೆ ಆವರಣದೊಳಗೆ ನಿರ್ಮಿಸಲಾಗುತ್ತಿದ್ದ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಈ ಬಾರಿ ಕೆಎನ್‍ವಿವಿ ಸಂಘದ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗುವುದು. ಇದರಿಂದ ಇಲ್ಲಿ ಆಗುತ್ತಿದ್ದ ಹೆಚ್ಚಿನ ಜನದಟ್ಟನೆ ತಪ್ಪಲಿದೆ ಎಂದರು.
ಗೋಷ್ಟಿ ಉಪಸಮಿತಿ ನೇತೃತ್ವ ವಹಿಸಿರುವ ಸಂಶೋಧಕ ಆರ್. ಎಂ. ಷಡಕ್ಷರಯ್ಯ ಮಾತನಾಡಿ, 25 ನೇ ಉತ್ಸವದಂಗವಾಗಿ ಪುರಾತತ್ವ ಇಲಾಖೆಯಿಂದ ಸ್ಮಾರಕಗಳು ಮತ್ತು ಪತ್ರಗಾರ ಇಲಾಖೆಯಿಂದ ಪತ್ರಗಳ ಪ್ರದರ್ಶನ ಏರ್ಪಡಿಸಲಾಗುವುದು. ಕಿತ್ತೂರಿಗೆ ಸಂಬಂಧಪಟ್ಟ 75 ಪ್ರಬಂಧಗಳ ಸಂಕಲನವನ್ನು ಉತ್ಸವದಲ್ಲಿ ಬಿಡುಗಡೆ ಮಾಡಲಾಗುವುದು.
ರಾಜ್ಯಮಟ್ಟದ ವಿಚಾರಗೋಷ್ಟಿಯನ್ನೂ ಆಯೋಜಿಸಲಾಗುವುದು ಎಂದು ಹೇಳಿದರು.
ಧಾರವಾಡ ನೀರಾವರಿ ನಿಗಮದ ಆಡಳಿತಾಧಿಕಾರಿ ಶಿವಾನಂದ ಭಜಂತ್ರಿ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಾದಂಬರಿಕಾರ ಯ. ರು. ಪಾಟೀಲ, ಡಾ. ವೆಂಕಟೇಶ್ ಉಣಕಲ್ಲಕರ, ಇತರರು ಮಾತನಾಡಿ ವಿವಿಧ ಸಲಹೆಗಳನ್ನು ನೀಡಿದರು.
ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಮಹೇಶ ಪತ್ರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಚನಬಸಪ್ಪ ಕೊಡ್ಲಿ, ಕನ್ನಡ,ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಆರ್. ವೈ. ಪರವಣ್ಣವರ, ಉಳವಪ್ಪ ಉಳ್ಳೇಗಡ್ಡಿ, ವಿವಿಧ ಇಲಾಖೆ ಅಧಿಕಾರಿಗಳು, 12 ಉಪಸಮಿತಿಗಳ ಸದಸ್ಯರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ. ಸೋಮಶೇಖರ ಹಲಸಗಿ ಸ್ವಾಗತಿಸಿ, ನಿರೂಪಿಸಿದರು.
Post a Comment