ತಾಯಿಯೇ ಮತಾಂತರ; ಅಳಲು ತೋಡಿಕೊಂಡ ಬಿಜೆಪಿ ಶಾಸಕ - kittur

2ಎ ಮೀಸಲಾತಿಗೆ ಪಂಚಮಸಾಲಿ ಸಂಘಟನೆ ಆಗ್ರಹ : ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ - click...

ತಾಯಿಯೇ ಮತಾಂತರ; ಅಳಲು ತೋಡಿಕೊಂಡ ಬಿಜೆಪಿ ಶಾಸಕ

ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ‘ನನ್ನ ಕ್ಷೇತ್ರದಲ್ಲಿ ಎಲ್ಲ ಜಾತಿಯ ಸುಮಾರು 15 ರಿಂದ 20 ಸಾವಿರ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ನನ್ನ ತಾಯಿಯೇ ಈ  ಪಿಡುಗಿಗೆ ಬಲಿಯಾಗಿದ್ದಾರೆ..'
ಮಂಗಳವಾರ ನಡೆದ ವಿಧಾನಸಭೆ ಕಲಾಪದಲ್ಲಿ ತಮಗಾದ ನೋವು ತೋಡಿಕೊಂಡವರು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು.
‘ರಾಜ್ಯದ ಬೇರೆ, ಬೇರೆ ಜಿಲ್ಲೆಗಳಲ್ಲೂ ಮತಾಂತರಗಳು   ವ್ಯಾಪಕವಾಗಿ ನಡೆಯುತ್ತಿವೆ. ಹೆತ್ತ ತಾಯಿಯನ್ನೇ ಮತಾಂತರ ಮಾಡಲಾಗಿದೆ' ಎಂದು ಅವರು ಅಳಲು ತೋಡಿಕೊಂಡರು.
‘ಗ್ರಾಮೀಣ ಪ್ರದೇಶಗಳಲ್ಲಿ ಹುಷಾರಿಲ್ಲದಿದ್ದರೆ ದೇವರ ಗುಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ‘ದಾಟು' ತೆಗೆಸುತ್ತಿದ್ದರು. ನಂಬಿಕೆಯ ಇಂಥ ವಿಷಯಗಳನ್ನು ನಿಷೇಧ ಮಾಡಲಾಯಿತು. 
ಆದರೆ  ಕ್ರಿಶ್ಚಿಯನ್ನರು ಇದನ್ನೇ ಮಾಡುತ್ತಿದ್ದಾರೆ. ಆರಾಮವಿಲ್ಲದವರು ಚರ್ಚಿಗೆ ಬಂದರೆ ಹುಷಾರಾಗುತ್ತಾರೆ, ಅವರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಅವರ ‘ಬ್ರೇನ್ ವಾಶ್’ ಮಾಡುತ್ತಾರೆ' ಎಂದು ಹೇಳಿದರು.
‘ನಮ್ಮ ಸ್ವಂತ ತಾಯಿಯೇ ಈ ಮತಾಂತರಕ್ಕೆ ಬಲಿಯಾಗಿದ್ದಾರೆ. ಅಲ್ಲಿ ಕರೆದುಕೊಂಡು ಹೋದ ಮೇಲೆ ಹಣೆಗೆ ಕುಂಕುಮ ಇಡಬಾರದು, ಮನೆಯಲ್ಲಿ ದೇವರುಗಳು ಫೋಟೊ ಹಾಕಬಾರದು, ಪೂಜಾ ಸಾಮಗ್ರಿ ಇಡಬಾರದು ಎಂದು ಮನದಾಳದಲ್ಲಿ ಬಿತ್ತಿ ಕಳುಹಿಸುತ್ತಾರೆ' ಎಂದು ಅವರು ಮಾಡಿ ಕಳಿಸಿದ್ದ ನಿರ್ಬಂಧಗಳನ್ನು ಕುರಿತು ಹೇಳಿದರು.
‘ಮನೆಗೆ ಬಂದಾಗ ನಮ್ಮ ತಾಯಿ ಮೊಬೈಲ್ ರಿಂಗ್‍ಟೋನ್ ಕೂಡಾ ಕ್ರಿಶ್ಚಿಯನ್ ಪ್ರಾರ್ಥನಾ ಹಾಡುಗಳನ್ನಿಟ್ಟುಕೊಂಡಿದ್ದರು. ಮನೆಗೆ ಬಂದ ನೆಂಟರಿಂದ ಇದರಿಂದ ಮುಜುಗರ ಅನುಭವಿಸಿದೆವು. ಇದರಿಂದ ಪೂಜೆ ಮಾಡುವ ಅವಕಾಶವನ್ನೂ ನಾವು ಮನೆಯಲ್ಲಿ ಕಳೆದುಕೊಂಡಿದ್ದೇವೆ' ಎಂದು ವಿಷಾದಿಸಿದರು.


‘ನಮ್ಮ ತಾಯಿಗೆ ಈ ಬಗ್ಗೆ ಪ್ರಶ್ನಿಸಿದರೆ ‘ಬೇಡವೆಂದರೆ ನಾನು ಏಕೆ ಇರಬೇಕು, ಸತ್ತು ಹೋಗುತ್ತೇನೆ’ ಎನ್ನುತ್ತಾರೆ. ಈ ರೀತಿಯ ಗೋಳು ನಮ್ಮ ಕುಟುಂಬದ್ದಾಗಿದೆ' ಎಂದು ನೋವು ತೋಡಿಕೊಂಡರು.
ಗೃಹ ಸಚಿವ ಅರಗ ಜ್ಞಾನೇಂದ್ರ ಉತ್ತರಿಸಿ, ‘ಧರ್ಮ  ಪ್ರಚಾರಕ್ಕೆ  ದೇಶದಲ್ಲಿ ಸ್ವಾತಂತ್ರ್ಯವಿದೆ. ಆದರೆ ಮತಾಂತರ ನಡೆಸಬಾರದು. ಇದು ಸಾಮಾಜಿಕ ಪಿಡುಗಾಗಿದೆ. ಅಶಾಂತಿಗೆ ಇದು ಕಾರಣವೂ ಆಗುತ್ತಿದೆ. ಇದಕ್ಕೆ ಬಿಗಿಯಾದ ಕಾನೂನು ರೂಪಿಸಿ ತಡೆಹಿಡಿಯಬೇಕಾದ ಅಗತ್ಯವಿದೆ' ಎಂದರು. 

0/Post a Comment/Comments