‘ಮೈ ಮುರಿಯುತನಕ ದುಡಿದರೂ ಸಿಗದ ನೆಮ್ಮದಿ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಬೆಳಗೆದ್ದು ಹೊತ್ತು ಮುಳುಗುವ ತನಕ ಮೈ ಮುರಿದು ದುಡಿದರೂ ರೈತರಿಗೆ ನೆಮ್ಮದಿ ಸಿಗುತ್ತಿಲ್ಲ. ಸಂತೋಷ ಸಿಗಬಹುದೆಂದು ಮಾಡುತ್ತಿರುವ ಬೆಳೆ ಪ್ರಯೋಗವೂ ಆತನನ್ನು ಸಾಲದ ದವಡೆಗೆ ಸಿಕ್ಕಿಸುತ್ತಿವೆ ಎಂದು ಅಖಂಡ ಕರ್ನಾಟಕ ರೈತಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ ವಿಷಾದಿಸಿದರು.
ತಾಲೂಕಿನ ಕತ್ರಿದಡ್ಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಲ್ಕು ಎಕರೆ ಜಮೀನು ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದರೂ ನೆಮ್ಮದಿ ದೊರಕುತ್ತಿಲ್ಲ. ಆದರೆ ಪಟ್ಟಣದಲ್ಲಿ ಒಂದು ಪಾನ್‍ಶಾಪ್ ಇಟ್ಟುಕೊಂಡವ ಇಂದು ಸುಖವಾಗಿ ಜೀವನ ಸಾಗಿಸುತ್ತಿದ್ದಾನೆ. ಅಲ್ಲಿ ಆತ ಒಬ್ಬನೇ ದುಡಿಯುತ್ತಾನೆ. ಇಲ್ಲಿ ಹೊಲದಲ್ಲಿ ತಾನು, ಹೆಂಡತಿ, ಮಕ್ಕಳು ಸೇರಿ ದುಡಿದರೂ ಬದುಕು ಸಾಗಿಸಲು ಪರದಾಡಬೇಕಾಗಿದೆ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ದೇಶಕ್ಕೆ ಅನ್ನ ನೀಡಿ ಬದುಕಿಸಿದವ ರೈತ. ಚುನಾವಣೆ ಸಂದರ್ಭದಲ್ಲಿ ರೈತನನ್ನು ಅನ್ನದಾತ ಎಂದು ಬಣ್ಣಿಸುತ್ತಾರೆ. ಆಯ್ಕೆಯಾದ ನಂತರ ಹೋಗಿ ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸುತ್ತಾರೆ. ಹಸಿರು ಟಾವೆಲ್ ಮಹತ್ವ ರಾಜಕಾರಣಿಗೆ ಗೊತ್ತಾಗಿದೆ. ಆದರೆ ನಮಗೆ ಗೊತ್ತಾಗುತ್ತಿಲ್ಲ ಎಂದು ಹಳಹಳಿಸಿದರು.
ರೈತಪರ ಹೋರಾಟಗಾರ ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ. ಎಚ್. ನೀರಲಕೇರಿ ಮಾತನಾಡಿ ಸರ್ಕಾರದ ವ್ಯಾಪಾರೀಕರಣದ ವ್ಯಾಮೋಹದಿಂದಾಗಿ ಜನಸಾಮಾನ್ಯರ ಜೀವನ ಅಧೋಗತಿಗೆ ತಳ್ಳಲ್ಪಟ್ಟಿದೆ. ಉದ್ಯಮಿಗಳ ಪರವಾಗಿರುವ ಸರ್ಕಾರದ ನೀತಿಗಳು ಸಾಮಾನ್ಯರ ಬದುಕಿನ ಮೇಲೆ ಗದಾಪ್ರಹಾರ ಮಾಡುತ್ತಿವೆ ಎಂದು ಟೀಕಿಸಿದರು.
ಭೂ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸಲಾಗುತ್ತಿದೆ. ಇದ್ದ ಜಮೀನು ಕಳೆದುಕೊಂಡರೆ ರೈತನ ಬದುಕು ಬೀದಿಗೆ ಬರುತ್ತದೆ. ಉದ್ಯಮಿಗಳ ಗುಲಾಮರಾಗಿ ಜೀವನ ಸಾಗಿಸುವ ಕಾನೂನುಗಳನ್ನು ಆಳುವ ಸರ್ಕಾರಗಳು ರೂಪಿಸುತ್ತಿರುವುದು ನಮ್ಮ ದುರಂತವಾಗಿದೆ ಎಂದು ದೂರಿದರು.
ರೈತರು ಮತು ಜನಸಾಮಾನ್ಯರು ಬದುಕು ನಡೆಸುವುದಕ್ಕೆ ಪರದಾಡುವ ಸ್ಥಿತಿ ನಿರ್ಮಾಣ ಮಾಡಲು ಮುಂದಾಗುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ನೂರಕ್ಕೂ ಹೆಚ್ಚು ರೈತಯುವಕರು ಇದೇ ಸಂದರ್ಭದಲ್ಲಿ ಹಸಿರು ಶಾಲು ಹೊದ್ದು ರೈತದೀಕ್ಷೆ ಪಡೆದರು.
ಕುಲವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಗಿರೆಪ್ಪ ಪರವಣ್ಣವರ, ಕಲ್ಲಪ್ಪ ಕುಗಟಿ, ಬಸವರಾಜ ಹನ್ನಿಕೇರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ನಾಗಪ್ಪ ಅಸಲನ್ನವರ ,ಮಹಾಂತೇಶ ಎಮ್ಮಿ, ದಶರಥ ಮಡಿವಾಳರ ,ಸತ್ಯವ್ವ ಮೇಕ್ಲಿ, ರೈತ ಮುಖಂಡರಾದ ಸೋಮಲಿಂಗ ಬಸೆಟ್ಟಿ, ರವಿ ಮಡಿವಾಳರ, ಶ್ರೀಶೈಲಗೌಡ ಕಮತರ, ಪ್ರಕಾಶ ಶಾಡಲಗೇರಿ, ಬಸವರಾಜ ಡೊಂಗರಗಾವಿ, ಅರ್ಜುನ ಪಡೆನ್ನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಸವರಾಜ ದಳವಾಯಿ ನಿರೂಪಿಸಿದರು.