ಭದ್ರಕೋಟೆ ಭೇದಿಸಿ ಹೆದ್ದಾರಿಗೆ ನುಗ್ಗಿದ ಹೋರಾಟಗಾರರು! - kittur



ಭದ್ರಕೋಟೆ ಭೇದಿಸಿ ಹೆದ್ದಾರಿಗೆ ನುಗ್ಗಿದ ಹೋರಾಟಗಾರರು!
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಚನ್ನಮ್ಮ ವರ್ತುಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಪ್ರತಿಭಟನೆ ಸಭೆ ಮುಗಿದ  ನಂತರ  ಹೆದ್ದಾರಿ ತಡೆಯಲಾಗುವುದು ಎಂದು ಹೋರಾಟಗಾರರು ಘೋಷಿಸಿದರು. ಅವರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟರು. 
ಇದಕ್ಕೊಪ್ಪದ ಹೋರಾಟಗಾರರು ಹೆದ್ದಾರಿ ಕಡೆಗೆ ಧಾವಿಸಲು ಪ್ರಾರಂಭಿಸಿದರು. ಪೊಲೀಸರು ಅವರನ್ನು ತಡೆದರು. ಹೈಕೋರ್ಟ್ ನ್ಯಾಯವಾದಿ ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ‘ನೀವೂ ರೈತರ ಮಕ್ಕಳೇ, ನಿಮ್ಮ ವಯಸ್ಸಿನಷ್ಟು ನನಗೆ  ಹೋರಾಟದ ಅನುಭವವಿದೆ. ಹಿಂಸೆಗೆ ಅವಕಾಶ ಕೊಡುವುದಿಲ್ಲ. ಶಾಂತಿ ರೀತಿಯಿಂದ ಬಂದ್ ಮಾಡುತ್ತೇವೆ’ ಎಂದು ಮುಖಂಡ ಶಿವಾನಂದ ಹೊಳೆಹಡಗಲಿ ಹೇಳಿದರು. 


ವಾದ,ವಿವಾದ ನಡೆದ ನಂತರ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಹೈಕೋರ್ಟ್ ನ್ಯಾಯವಾದಿ ನೀರಲಕೇರಿ ಹೆದ್ದಾರಿ ಕಡೆಗೆ ಹೊರಟರು. ಅವರನ್ನು ಹಾಗೂ ಅವರ ಜೊತೆಗಿದ್ದ ಮಲ್ಲಿಕಾರ್ಜುನ ವಾಲಿ,  ಶಿವಾನಂದ ಹೊಳೆಹಡಗಲಿ, ಮಹಾಂತೇಶ ರಾವುತ್, ಅಪ್ಪೇಶ ದಳವಾಯಿ, ಸಿದ್ದಣ್ಣ ಕಂಬಾರ ಜೊತೆಗಿದ್ದ ನೂರಾರು ಹೋರಾಟಗಾರರ ಸುತ್ತ ಹೆದ್ದಾರಿ ಪ್ರವೇಶದಂತೆ  ಹಗ್ಗ   ತಂದು ಸುತ್ತುವರೆಯಲಾಯಿತು. ಇದಕ್ಕೂ ಜಗ್ಗದೆ ಅದನ್ನು ಭೇದಿಸಿ ಸುಮಾರು 15 ನಿಮಿಷ ಹೆದ್ದಾರಿ ಬಂದ್ ಮಾಡಲಾಯಿತು. ಇದರಿಂದಾಗಿ ಹೆದ್ದಾರಿ ಮೇಲೆ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತವು. 


ಡಿವೈಎಸ್‍ಪಿ ಶಿವಾನಂದ ಕಟಗಿ, ಸಿಪಿಐ ಮಂಜುನಾಥ ಕುಸುಗಲ್ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.


 

0/Post a Comment/Comments