ಅವರು ಮೇಲೆದ್ದಾಗ ಕಳಚಿತ್ತು ಪಂಚೆ..!
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎದ್ದು ನಿಂತಾಗ ಅವರ ಪಂಚೆ ಕಳಚಿದ್ದು, ಅದನ್ನು ಗಮನಿಸಿದ ತಕ್ಷಣ ಕೆಪಿಸಿಸಿ ಅಧ್ಯಕ್ಷ, ಶಾಸಕ ಡಿ. ಕೆ. ಶಿವಕುಮಾರ್ ಹೇಳಿದ್ದು.. ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ವಿಧಾನಸಭೆ ಕಲಾಪದಲ್ಲಿ ಬುಧವಾರ ಮಾತನಾಡಲು ಸಿದ್ದರಾಮಯ್ಯ ಎದ್ದು ನಿಂತರು. ಸೊಂಟಕ್ಕೆ ಸುತ್ತಿದ್ದ ಅವರ ಪಂಚೆ ಕಳಚಿದ್ದನ್ನು ಮೊದಲು ನೋಡಿದವರು ಡಿಕೆಶಿ. ಹೀಗಾಗಿ ಕಿವಿ ಸಮೀಪ ಬಂದು ಗುಟ್ಟಾಗಿ ‘ಪಂಚೆ' ವಿಷಯ ಹೇಳಿದರು.
‘ಹೌದಾ..' ಎಂದ ಸಿದ್ದರಾಮಯ್ಯ ಪಂಚೆ ಎತ್ತಿಕಟ್ಟಿಕೊಂಡರು. ‘ಸ್ವಲ್ಪ ಪಂಚೆ ಕಳಚಿಕೊಂಡು ಬಿಟ್ಟಿದೆ. ಕಟ್ಟಿಕೊಂಡು ವಿಚಾರ ಹೇಳುತ್ತೇನೆ' ಎಂದರು. ಇಷ್ಟಕ್ಕೆ ಸುಮ್ಮನಾಗದೇ ಅವರು ‘ನೋಡಿ ಪಂಚೆ ಕಳಚಿಕೊಂಡು ಬಿಟ್ಟಿದೆ ಈಶ್ವರಪ್ಪ' ಎಂದರು. ಅವರು ಗದ್ದಕ್ಕೆ ಕೈ ಹಚ್ಚಿಕೊಂಡು ಮುಗಳ್ನಗುತ್ತ ಕೂತಿದ್ದರು.
‘ಇತ್ತೀಚೆಗೆ ಹೊಟ್ಟೆ ದಪ್ಪಾಗಿಬಿಟ್ಟಿದೆ ಕಳಚ್‍ಗೋತಾ ಇದೆ' ಎಂದು ಸಮಜಾಯಿಷಿ ನೀಡಿದರು.
ಇದೇ ಸಂದರ್ಭದಲ್ಲಿ ಕುರ್ಚಿಯಿಂದ ಮೇಲೆದ್ದ ಮಾಜಿ ವಿಧಾನಸಭೆ ಅಧ್ಯಕ್ಷ, ಕಾಂಗ್ರೆಸ್ ಶಾಸಕ ರಮೇಶ್‍ಕುಮಾರ್, ‘ನಮ್ಮ (ಪಕ್ಷದ) ಅಧ್ಯಕ್ಷರು ಗುಟ್ಟಾಗಿ ಬಂದು ಪಂಚೆ ವಿಷಯ ಹೇಳಿದರೆ.. ಇವರೆಲ್ಲ (ಸಿದ್ದರಾಮಯ್ಯ) ಊರಿಗೆಲ್ಲ ಹೇಳ್ತಾರೆ' ಎಂದು ತಮಾಷೆ ಮಾಡಿದರು.
‘ಈಶ್ವರಪ್ಪನವರು ಪ್ರಯತ್ನ ಪಡತಾ ಇದ್ದಾರೆ, ಸಾಧ್ಯವಾಗಲ್ಲ. ಆದರೆ ಅದಾಗೇ ಅದು ಕಳಚಿಕೊಂಡಿದೆ' ಎಂದೂ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ವಿರೋಧಿ ಈಶ್ವರಪ್ಪ ಅವರನ್ನು ಕಿಚಾಯಿಸಿದರು.
Post a Comment