ಅರಳಿದ ಅರಮನೆ ನಿರ್ಮಾಣದ ಕನಸು - kittur

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕಿತ್ತೂರು ಪುನರ್ ಅರಮನೆಯ ನಿರ್ಮಾಣದಲ್ಲಿಯ ದರ್ಬಾರ ಹಾಲ್ ನೋಡಿದರೆ ಪ್ರೇಕ್ಷಕರ ಭಾವನೆಗಳು ವ್ಯಕ್ತವಾಗುವಂತಿರಬೇಕು. ಏಕೆಂದರೆ ಕಿತ್ತೂರು ಇತಿಹಾಸ ಬಗ್ಗೆ ಸಾರ್ವಜನಿಕರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಕಿತ್ತೂರು ಪ್ರಾಧಿಕಾರ ಆಯುಕ್ತ ಹಾಗೂ ಉಪವಿಭಾಗಾಧಿಕಾರಿ ಶಶಿಧರ ಬಗಲಿ ತಿಳಿಸಿದರು.
ಇಲ್ಲಿಯ ಕೆಎನ್‍ವಿವಿ ಸಂಘದ ಪಿಯು ಕಾಲೇಜು ಸಭಾಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ತಜ್ಞರ ಜೊತೆಗಿನ ಸಭೆಯಲ್ಲಿ ಅವರು ಮಾತನಾಡಿದರು.
ಕೋಟೆಯ ಮುಂಚೂಣಿ ಚಿತ್ರಣ ಹೇಗಿರಬೇಕು ಎಂಬ ಬಗ್ಗೆ ಜೂಮ್ ಮೀಟಿಂಗ್ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದರು.
ಕಿತ್ತೂರು ಇತಿಹಾಸಕ್ಕೆ ಸಂಬಂಧಪಟ್ಟ ಕುರುಹುಗಳ ಅಭಿವೃದ್ಧಿಗೆ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಸಾಹಿತ್ಯಿಕ ಶಕ್ತಿಯೂ ಇದಕ್ಕೆ ಬೇಕಾಗಿದೆ. ಐತಿಹಾಸಿಕವಾಗಿರುವ ಅರಮನೆ ಪುನರ್ ನಿರ್ಮಾಣದ ಬಗ್ಗೆ ಸಂವೇದನೆಯಿಂದ ಸಂರಕ್ಷಣೆ ಮಾಡಬೇಕಾಗಿದೆ ಎಂದು ವಿವರಿಸಿದರು.
ಅರಮನೆ ಪುನರ್ ನಿರ್ಮಾಣದ ಕೆಲಸವೂ ತ್ವರಿತ ಗತಿಯಲ್ಲಿ ಆಗಬೇಕಿದೆ. ಇದಕ್ಕಾಗಿ ಸರ್ಕಾರ ಮತ್ತು ಶಾಸಕರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಇದಕ್ಕಾಗಿ ಶಾಸಕ ದೊಡ್ಡಗೌಡರ ಅವರು ಪ್ರತಿ ಶುಕ್ರವಾರ ಸಭೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಪುರಾತತ್ವ ಮತ್ತು ಪರಂಪರೆ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಎಸ್. ಕೆ. ವಾಸುದೇವ ಮಾತನಾಡಿ 1975ರಲ್ಲಿ ಕೋಟೆ ಒಳಾವರಣದಲ್ಲಿ ಬದನೆ, ಮೆಣಸಿನಕಾಯಿ ಮತ್ತು ಜೋಳ ಬೆಳೆಯುತ್ತಿದ್ದರು ಎಂದು ಅಂದಿನ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.
ಸಚಿವರಾಗಿದ್ದ ದಿ. ಎಸ್. ಆರ್. ಕಂಠಿ ಅವರ ಕಾಲದಲ್ಲಿ ಮೊದಲ ಬಾರಿಗೆ ಕೋಟೆ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಆ ಸಂದರ್ಭದಲ್ಲಿ ಶಾಸನವೊಂದು ದೊರಕಿತು. ಅದರ ಮಾಹಿತಿಯಂತೆ ಸುಮಾರು 800 ವರ್ಷಗಳ ಹಿಂದೆ ಗೋವಾ ಕದಂಬರ ಕಾಲದಲ್ಲಿ ಇಲ್ಲಿ ಜನವಸತಿ ಇತ್ತು ಎಂದು ಸಂಶೋಧಕ ಪಾಡಿಗಾರ ಮಾಹಿತಿ ನೀಡಿದರು ಎಂದರು.
ಪೂರ್ವ ದಿಕ್ಕಿನಿಂದ ಮಣ್ಣು ತೆಗೆಯುವ ಕೆಲಸ ಮಾಡಿದಾಗ ಕೆಲ ವಸ್ತುಗಳು ಸಿಕ್ಕವು. ಇದ್ದಿಲು, ಮಡಕೆ ಚೂರುಗಳೂ ಇದ್ದವು. ಈಗಿರುವ ಹನುಮಂತ ದೇವರ ಬಳಿಯ ವೀಕ್ಷಣಾ ಗೋಪುರ ಮೊದಲ ಸುತ್ತಿನ ಕೋಟೆಯ ಗೋಪುರವಾಗಿದೆ ಎಂದು ಹೇಳಿದರು.
ಅರಮನೆಯ ಪ್ರತಿರೂಪ ಮಾಡುವುದು ಅಸಾಧ್ಯವೇನಲ್ಲ. ವೈಜ್ಞಾನಿಕ ಉತ್ಖನನ ಮಾಡಬೇಕು. ಅವಶೇಷ ಪತ್ತೆ ಹಚ್ಚಲು ಪ್ರಯತ್ನಿಸಬೇಕು. ಇಲ್ಲಿನ ನೀರು ಸರಬರಾಜು ಹಾಗೂ ಚರಂಡಿ ವ್ಯವಸ್ಥೆ ಸಮಕಾಲೀನ ವಾಡೆಗಳಲ್ಲಿ ನೋಡಲು ಸಾಧ್ಯವಿಲ್ಲ. ಅಂತಹ ತಂತ್ರಜ್ಞಾನವನ್ನು ಇದು ಒಳಗೊಂಡಿತ್ತು ಎಂದರು.
ಜನರ ಆಸಕ್ತಿ ಬೆಳೆಸುವಂತೆ ಅರಮನೆ ಪುನರ್ ನಿರ್ಮಾಣವಾಗಬೇಕು.  ಇದಕ್ಕಾಗಿಯೇ ಬೇರೊಂದು ಸಮಿತಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಯ. ರು. ಪಾಟೀಲ ಮಾತನಾಡಿ, 4 ಎಕರೆ ವಿಸ್ತೀರ್ಣದಲ್ಲಿ ಅರಮನೆ ನಿರ್ಮಾಣ ಮಾಡಲಾಗಿತ್ತು. ಅರಮನೆ ಸ್ವರೂಪ ಹೊಂದುವ ವಾಡೆ ಇದಾಗಿತ್ತು. ಅಂಕಲಗಿ, ನವಲಗುಂದ ವಾಡೆ, ಮಠಗಳನ್ನು ನೋಡಿಕೊಂಡು ಅರಮನೆ ನಿರ್ಮಾಣ ಮಾಡಬೇಕು ಎಂದರು.
ತಜ್ಞರಾದ ಆರ್. ಎಂ. ಷಡಕ್ಷರಯ್ಯ, ಡಾ. ಅಪ್ಪಣ್ಣ ವಗ್ಗರ, ಮಹೇಶ ಚನ್ನಂಗಿ, ಡಾ. ಎಸ್. ಎಂ. ಲೋಕಾಪುರ, ಪ್ರೊ. ಸ್ಮೀತಾ ಸುರೇಬಾನಕರ, ಡಾ. ಅಮರೇಶ ಯಾತಗಲ್, ರಾಣಿ ಚನ್ನಮ್ಮ ವಿವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠದ ಪ್ರೊ. ಎಸ್. ಎಂ. ಗಂಗಾಧರಯ್ಯ, ವಾಸ್ತುವಿನ್ಯಾಸಕ ಸೂರ್ಯಪ್ರಕಾಶ, ರುದ್ರಣ್ಣ, ಬಸವರಾಜ ಮಾತನಾಡಿದರು.
ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕ್ಯುರೇಟರ್ ರಾಘವೇಂದ್ರ, ಪ್ರಾಧಿಕಾರ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಪ್ರೊ. ಆರ್. ವೈ. ಪರವಣ್ಣವರ, 
ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕಿ ಶೋಭಾ ನಾಯಕ ಸ್ವಾಗತಿಸಿ, ನಿರೂಪಿಸಿದರು. ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ವಂದಿಸಿದರು.


ಕಟ್ಟಿಗೆ ಬಳಕೆ

ಕಿತ್ತೂರು ಅರಮನೆಗೆ ಈ ಭಾಗದಲ್ಲಿ ಮೊದಲು ವ್ಯಾಪಕವಾಗಿ ದೊರೆಯುತ್ತಿದ್ದ ಕರಿಮತ್ತಿನ ಕಟ್ಟಿಗೆಯನ್ನು ಹೆಚ್ಚು ಬಳಸಲಾಗಿತ್ತು.  ಹುಬ್ಬಳ್ಳಿಯ ಮೂರುಸಾವಿರ ಮಠ, ಅಂಕಲಗಿಮಠ ಇಲ್ಲಿಯ ಅರಮನೆಗೆ ವಿನ್ಯಾಸಕ್ಕೆ ಸಮೀಪವಾಗಿವೆ ಅನಿಸುತ್ತದೆ

ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠ

ತಲೆ ತಗ್ಗಿಸಬೇಕು

ಬೇರೆ ಪ್ರಾಧಿಕಾರಗಳಲ್ಲಿ ನಡೆಯುತ್ತಿರುವ ಕೆಲಸಗಳನ್ನು ನೋಡಿದರೆ ಕಿತ್ತೂರು ಪ್ರಾಧಿಕಾರದಲ್ಲಿ ಹೇಳಿಕೊಳ್ಳುವಂತೆ ಕೆಲಸ ನಡೆದಿಲ್ಲ. ಇದು ತಲೆತಗ್ಗಿಸುವ ವಿಚಾರ

ಪ್ರೊ. ಆರ್. ಎಂ. ಷಡಕ್ಷರಯ್ಯ, ಸಂಶೋಧಕರು

ವಾಸ್ತುಶಿಲ್ಪ ಗಮನಿಸಿ

ವಾಸ್ತುಶಿಲ್ಪ, ವಿನ್ಯಾಸ, ಕಟ್ಟಡ ಪರಿಕರಗಳನ್ನು ಗಮನಿಸಿ ಇತಿಹಾಸಕ್ಕೆ ಧಕ್ಕೆ ಹಾಗದ ರೀತಿ ಅರಮನೆ ಪುನರ್ ನಿರ್ಮಾಣ ಮಾಡಬೇಕು

ಪ್ರೊ. ಸ್ಮೀತಾ ಸುರೇಬಾನಕರ, ಆರ್‌ಪಿಡಿ ಕಾಲೇಜು ವಿಶ್ರಾಂತ ಪ್ರಾಚಾರ್ಯೆ

ದಾಖಲೆ ಒದಗಿಸುವೆ

ಕೊರೊನಾದಿಂದ ಪತ್ರಗಾರ ಇಲಾಖೆಗೆ ಹೋಗಲಾಗಿಲ್ಲ. ಕಿತ್ತೂರು ಅರಮನೆ ಬಗ್ಗೆ ಅಲ್ಲಿ ಸಿಗುವ ದಾಖಲೆಗಳನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಒದಗಿಸುತ್ತೇನೆ

ಡಾ. ಅಪ್ಪಣ್ಣ ವಗ್ಗರ, ಪ್ರಾಧ್ಯಾಪಕ, ನರಗುಂದ

ಭಾವನೆ ಬಿಡಲಾಗದು

ಪ್ರವಾಸೋದ್ಯಮ ತಾಣವಾಗಿ ಬೆಳೆಸುವ ಉದ್ದೇಶದಿಂದ ಪ್ರಾದೇಶಿಕ ಭಾವನೆ ಬಿಟ್ಟು ಕೊಡಲಾಗುವುದಿಲ್ಲ. ಸ್ಥಳೀಯ ಪ್ರಜ್ಞೆ ಇಟ್ಟುಕೊಂಡು ಅರಮನೆ ನಿರ್ಮಿಸುವುದಾಗಬೇಕು

ಡಾ. ಎಸ್. ಎಂ. ಲೋಕಾಪುರ, ಸಹಪ್ರಾಧ್ಯಾಪಕ, ಬೈಲಹೊಂಗಲ

ಚ್ಯತಿ ಬರದಿರಲಿ

ಅರಮನೆ ನಿರ್ಮಾಣ ಎಂಬುದು ಚರಿತ್ರೆ ನಿರ್ಮಾಣದ ಕೆಲಸ. ವಿದ್ವಾಂಸರನ್ನು ಸಂಪರ್ಕಿಸಿ ವಾಸ್ತುವಿಗೆ ಚ್ಯುತಿ ಬರದಂತೆ ನಿರ್ಮಿಸಬೇಕು

ಡಾ. ಅಮರೇಶ ಯಾತಗಲ್, ಶಾಸನಶಾಸ್ತç ಅಧ್ಯಯನ ವಿಭಾಗ ಮುಖ್ಯಸ್ಥ, ಹಂಪಿ

ತಜ್ಞರ ಸಲಹೆಯಂತೆ ನಿರ್ಮಾಣ

ಇತಿಹಾಸ ತಜ್ಞರು ಮತ್ತು ಸಂಶೋಧಕರ ಜೊತೆ ಚರ್ಚಿಸಿ, ಪ್ರಾಚ್ಯವಸ್ತು ಇಲಾಖೆಯ ತಜ್ಞರ ಸಂಪರ್ಕಿಸಿ ಅರಮನೆ ನಿರ್ಮಾಣದ ಅಂತಿಮ ರೂಪು,ರೇಷೆ ಸಿದ್ಧಪಡಿಸಲಾಗುವುದು

ಸೂರ್ಯಪ್ರಕಾಶ್, ಖ್ಯಾತ ವಾಸ್ತು ವಿನ್ಯಾಸಕಾರ

0/Post a Comment/Comments