ಸೋಯಾಬಿನ್ ಗೆ ರೋಗ : ಪರಿಹಾರಕ್ಕೆ ರೈತಸಂಘದ ಆಗ್ರಹ - Kittur


ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಬಹುನಿರೀಕ್ಷೆ ಇಟ್ಟುಕೊಂಡು ಬಿತ್ತನೆ ಮಾಡಿದ್ದ ಸೋಯಾಅವರೆ ಬೆಳೆ ಬೆಂಕಿ ರೋಗಕ್ಕೆ ಸಂಪೂರ್ಣ ಬಲಿಯಾಗಿದ್ದು, ಎಕರೆಗೆ ರೂ. 50ಸಾವಿರ ಪರಿಹಾರ ನೀಡುವಂತೆ ಅಖಂಡ ಕರ್ನಾಟಕ ರೈತ ಸಂಘಟನೆ ಮುಖಂಡ ಹಾಗೂ ಹೈಕೋರ್ಟ್ ಹಿರಿಯ ವಕೀಲರಾದ ಪಿ. ಎಚ್. ನೀರಲಕೇರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
ಕಾರ್ಯಕರ್ತರೊಂದಿಗೆ ಬುಧವಾರ ಸಂಜೆ ಇಲ್ಲಿಯ ತಹಶೀಲು ಕಚೇರಿಗೆ ಆಗಮಿಸಿದ ಅವರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರಿಗೆ ಮನವಿ ಅರ್ಪಿಸಿ ಈ ಆಗ್ರಹವನ್ನು ಮಾಡಿದರು.
ಹಗಲು ರಾತ್ರಿ ಎನ್ನದೆ ಹೊಲದಲ್ಲಿ ದುಡಿಯುತ್ತಿರುವ ರೈತಕುಟುಂಬಗಳ 60 ವಯಸ್ಸು ಮೀರಿದ ಅನ್ನದಾತನಿಗೆ ರೂ. 6 ಸಾವಿರ ಮಾಸಾಶನ ನೀಡಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ದಿನಕ್ಕೆ ಕನಿಷ್ಠ 12 ಗಂಟೆ ಹಗಲು ವೇಳೆಯಲ್ಲಿ ನಿರಂತರ ವಿದ್ಯುತ್ ಪೂರೈಸಬೇಕು ಎಂದರು.
ವಿದ್ಯುತ್ ಖಾಸಗೀಕರಣ ಮಾಡುವುದು ಕೈ ಬಿಡಬೇಕು. ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಕೇಳಿಕೊಂಡರು.
ಕೃಷಿ ಕಾಯಕದಲ್ಲಿ ತೊಡಗಿರುವ ಹಾಗೂ ಕೂಲಿ ಕಾರ್ಮಿಕರಿಗೆ ಕೃಪಾಂಕ ನೀಡಬೇಕು. ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ಶೇ 35 ರಷ್ಟು ಮೀಸಲಾತಿ ನೀಡಬೇಕು ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಪ್ರಧಾನ ಕಾರ್ಯದರ್ಶಿ  ಬೈಲಪ್ಪ (ಅಪ್ಪೇಶ)ದಳವಾಯಿ, ಮುಖಂಡರಾದ ಶಿವಾನಂದ ಹೊಳೆಹಡಗಲಿ, ಕಲ್ಲಪ್ಪ ಕುಗಟಿ, ಪರ್ವತಗೌಡ ಬಾಬಾಗೌಡ ಪಾಟೀಲ,  ಅಶೋಕ ದಳವಾಯಿ,ಮಡಿವಾಳಪ್ಪ ವರಗಣ್ಣವರ,ಶಂಕರಣ್ಣ ಸರಪಳಿ, ಸಿದ್ದಣ್ಣ ಕಂಬಾರ ನಿಂಗಪ್ಪ ನಂದಿ,        ಮಹೇಶ ಕಾದ್ರೊಳ್ಳಿ , ಚನ್ನಪ್ಪ ಗಣಾಚಾರಿ, ಬಸವರಾಜ ಡೊಂಗರಗಾವಿ,ಬಿಷ್ಟಪ್ಪ ಶಿಂಧೆ,ಸೋಮಲಿಂಗ ಪುರದ,ಅರ್ಜುನ ಪಡೆನ್ನವರ, ಬಸವರಾಜ ಹನ್ನಿಕೇರಿ  ಇದ್ದರು.

                                                                 ಗಿರೆಪ್ಪ ಅಧ್ಯಕ್ಷ
ಚನ್ನಮ್ಮನ ಕಿತ್ತೂರು: ಇದಕ್ಕೂ ಪೂರ್ವದಲ್ಲಿ ನಿಚ್ಚಣಕಿ ಗ್ರಾಮದಲ್ಲಿ ನಡೆದ ಸಂಘಟನೆ ಸಭೆಯಲ್ಲಿ ಗಿರೆಪ್ಪ ಪರವಣ್ಣವರ ಅವರನ್ನು ಅಖಂಡ ಕರ್ನಾಟಕ ರೈತ ಸಂಘಟನೆ ಕಿತ್ತೂರು ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.