ಗ್ರಾಮ ಪಂಚಾಯ್ತಿ ಎದುರು ಗ್ರಾಮಸ್ಥರ ಪ್ರತಿಭಟನೆ
ಪ್ರೆಸ್‍ಕ್ಲಬ್ ವಾರ್ತೆ
ದೊಡವಾಡ: ಸಮೀಪದ ಬುಡರಕಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪಂಚಾಯ್ತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
2019-20 ನೇ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ಹಾನಿತಟ್ಟಿತ್ತು. ಅವುಗಳ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾಗಿರುವ ಪರಿಹಾರ ಧನ ವಿತರಣೆಯಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಅವ್ಯವಹಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮ ಎಸಗಿರುವ ಅವರ ಮೇಲೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಾನ ಮನಸ್ಕ ಗೆಳೆಯರ ಬಳಗದ ಸದಸ್ಯರು ಒಕ್ಕೊರಲದಿಂದ ಆಗ್ರಹಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದಿದ್ದ ತಹಶೀಲ್ದಾರ್ ಬಸವರಾಜ ನಾಗರಾಳ ಅವರು ಪ್ರತಿಭಟನೆಕಾರರ ಮನವೊಲಿಸಲು ಪ್ರಯತ್ನಿಸಿದರು. ಮನೆ ಕಳೆದುಕೊಂಡು ಎರಡು ವರ್ಷಗಳಾಗಿದೆ. ಬದುಕಲು ಜಾಗವಿಲ್ಲದೆ ಗುಡಿ ಗುಂಡಾರಗಳಲ್ಲಿ ವಾಸಿಸುತ್ತಿದ್ದೇವೆ. ಬೀದಿ ಬದಿಯಲ್ಲಿ ಶೆಡ್ಡು ಹಾಕಿಕೊಂಡು ಸಣ್ಣ ಮಕ್ಕಳು ಹಾಗೂ ದನ ಕರುಗಳೊಂದಿಗೆ ಜೀವನ ನಡೆಸುವುದು ಕಡು ಕಷ್ಟವಾಗಿದೆ ಎಂದು ವೃದ್ಧರು, ಮಹಿಳೆಯರು ಅವರ ಎದುರು ಗೋಳು ತೋಡಿಕೊಂಡರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಹಾಗೂ ಸಾಮಾಜಿಕ ಹೋರಾಟಗಾರ ರಫೀಕ್ ಬಡೇಘರ್ ಮಾತನಾಡಿ, ಬುಡರಕಟ್ಟಿ ಗ್ರಾಮದಲ್ಲಿ ನಿಜವಾಗಿ ಮನೆ ಬಿದ್ದವರಿಗೆ ಮನೆ ನಿರ್ಮಾಣಕ್ಕೆ ಪರಿಹಾರ ಧನ ನೀಡದೆ ಅನ್ಯಾಯವೆಸಗಲಾಗಿದೆ. ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಇದಕ್ಕೆ ಸ್ಪಂದಿಸದಿದ್ದರೆ ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಹಾನಿಂಗ ಕಿತ್ತೂರ, ಶಶಿಕುಮಾರ ಪಾಟೀಲ, ಸಿದ್ದಾರೂಢ ಹೊಂಡಪ್ಪನವರ ಮಾತನಾಡಿ, ಸಮರ್ಪಕ ಪರಿಶೀಲನೆ ನಡೆಸದೆ ತಮಗೆ ಇಷ್ಟ ಬಂದಂತೆ ದಾಖಲೆ ಸೃಷ್ಟಿಸಿ ಪರಿಹಾರ ಧನ ವಿತರಣೆಯಲ್ಲಿ ಅಕ್ರಮ ಎಸಗಿರುವ ಪಂಚಾಯ್ತಿ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಬಸವರಾಜ ನಾಗರಾಳ ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು.
ಮಂಜು ಇಂಗಳಗಿ, ಪಂಚನಗೌಡ ಪಾಟೀಲ, ಮುತ್ತು ಉಳ್ಳಿಗೇರಿ, ಮಲ್ಲಯ್ಯ ಪೂಜೇರಿ, ಶಂಕರ ಕಲ್ಯಾಣದ, ಅನ್ನಪೂರ್ಣ ನಿಕ್ಕಮ್ಮನವರ, ಪಾರಮ್ಮ ಮಠಪತಿ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಅಹಿತಕರ ಘಟನೆ ನಡೆಯದಂತೆ ದೊಡವಾಡ ಠಾಣೆ ಪಿಎಸ್‍ಐ ಗಜಾನನ ನಾಯಕ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
Post a Comment