ದೊಡವಾಡ ಭಾಗದಲ್ಲಿ ಬ್ಯಾಟರಿ ಕಳ್ಳತನ ಹಾವಳಿ
ಪ್ರೆಸ್ಕ್ಲಬ್ ವಾರ್ತೆ
ದೊಡವಾಡ: ದೊಡವಾಡ ಸೇರಿ ಸವದತ್ತಿ ತಾಲೂಕಿನ ಯಡಹಳ್ಳಿ, ಕೆಂಚರಾಮಹಾಳ, ಸಂಗ್ರೇಶಕೊಪ್ಪ, ಇನಾಮಹೊಂಗಲ ಗ್ರಾಮಗಳಲ್ಲಿ ನಡೆಯುತ್ತಿರುವ ಬ್ಯಾಟರಿ ಕಳ್ಳರ ಹಾವಳಿಯಿಂದಾಗಿ ಟ್ರ್ಯಾಕ್ಟರ್ ಮಾಲೀಕರಲ್ಲಿ ಆತಂಕ ಮನೆ ಮಾಡಿದೆ.
ಕಳೆದೊಂದು ವಾರದಿಂದ ಬ್ಯಾಟರಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ದಿಕ್ಕು ತೋಚದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ದೈನಂದಿನ ಕೆಲಸ ಮುಗಿಸಿದ ಬಳಿಕ ರೈತರು ಶೆಡ್ಡು ಹಾಗೂ ಮನೆಗಳ ಮುಂದೆ ವಾಹನ ನಿಲ್ಲಿಸುತ್ತಾರೆ. ಹೊಂಚು ಹಾಕಿ ಮಧ್ಯರಾತ್ರಿ ಧಾವಿಸಿ ಬ್ಯಾಟರಿ ಬಿಚ್ಚಿಕೊಂಡು ಪರಾರಿಯಾಗುತ್ತಿದ್ದಾರೆ. ದೊಡವಾಡ ಗ್ರಾಮದ ಹಣಮಂತ ಸಪ್ಪಡ್ಲಿ ಹಾಗೂ ಬಸನಗೌಡ ಪಾಟೀಲ ಅವರಿಗೆ ಸೇರಿದ ಟ್ರ್ಯಾಕ್ಟರ್ ಬ್ಯಾಟರಿ ಬಿಚ್ಚಿಕೊಂಡು ಪರಾರಿಯಾಗಿದ್ದಾರೆ ಎಂದು ರೈತರು ದೂರಿದರು.
ದೊಡವಾಡ ಪೊಲೀಸ್ ಠಾಣೆ ಪಿಎಸ್ಐ ಗಜಾನನ ನಾಯಕ, ಕಳ್ಳತನವಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹತ್ತಿರದಲ್ಲಿರುವ ಕೆವಿಜಿ ಬ್ಯಾಂಕಿಗೆ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದರು. ಬ್ಯಾಟರಿ ಕಳ್ಳತನದ ಹಿಂದೆ ದೊಡ್ಡ ಜಾಲವೇ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ದೊಡವಾಡ ಮತ್ತು ಸವದತ್ತಿ ಪೊಲೀಸರು ಕಳ್ಳರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.